ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಮನವಿ

0
9
loading...

ಕನ್ನಡಮ್ಮ ಸುದ್ದಿ-ಧಾರವಾಡ: ಉತ್ತರ ಕರ್ನಾಟಕದ ಸಮಗ್ರ ಪ್ರಗತಿಯನ್ನು ದಕ್ಷಿಣ ಕರ್ನಾಟಕದ ಮಾದರಿಯಲ್ಲಿ ಅಭಿವೃದ್ಧಿಗೊಳಿಸಬೇಕು ಎಂದು ವಿವಿಧ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕ ಹೋರಾಟ ಸಮಿತಿ, ಮಹಾದಾಯಿ ಮಹಾಸಂಸ್ಥೆ, ಉತ್ತರ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ, ಲಿಡಕರ ಸಂಸ್ಥೆ ಮತ್ತು ರಕ್ಷಣಾ ವೇದಿಕೆ ರಂಗ ಕಲಾ ವೇದಿಕೆ ಪದಾಧಿಕಾರಿಗಳು ಜುಬ್ಲಿ ಸರ್ಕಲ್‍ನಿಂದ ಮೆರವಣಿಗೆ ಹೊರಟು ಧಾರವಾಡ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸಿದರು. 13 ಜಿಲ್ಲೆಗಳ ಭೌತಿಕ ಸ್ಥಿತಿಗತಿ ಅಭಿವೃದ್ಧಿ ಪರ ಕಾರ್ಯಗಳು ಶೈಕ್ಷಣಿಕ, ಆರೋಗ್ಯ, ಔದ್ಯೋಗಿಕ, ಉದ್ಯೋಗ, ಕೃಷಿ ಕ್ಷೇತ್ರ, ನೀರಾವರಿ ಯೋಜನೆ ಉದ್ಯೋಗ ಸೃಷ್ಟಿ ಉದ್ದಿಮೆಗಳು ಮತ್ತು ಆಡಳಿತ ರಂಗದಲ್ಲಿ, ದಕ್ಷಿಣ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರ ಜಿಲ್ಲೆಗಳ ಪ್ರಗತಿಗೆ ಹೋಲಿಸಿದಲ್ಲಿ ಉತ್ತರ ಕರ್ನಾಟಕ ಸರ್ವರಂಗಗಳಲ್ಲಿ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಮುಂಬೈ ಕರ್ನಾಟಕ ಮತ್ತು ಹೈದರಾಬಾದ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ, ಮೂರು ತಿಂಗಳು ಗುಲ್ಬರ್ಗಾ ಮತ್ತು ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಸಭೆಯ ಕಾರ್ಯಕಲಾಪಗಳನ್ನು ನಡೆಸಿದುವುದರ ಮೂಲಕ, ಆಯಾ ಪ್ರಾದೇಶಿಕ ಮೂಲಭೂತ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತಂತೆ ವಿಸೃತವಾಗಿ ಚರ್ಚಿಸಿ, ಸೂಕ್ತ ನಿರ್ಧಾರ ಪ್ರಕಟಿಸಬೇಕು ಮತ್ತು ನಿರ್ಧಾರಗಳು ತಕ್ಷಣ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಬೇಕು. ಉತ್ತರ ಕರ್ನಾಟಕದ ಸಕ್ಕರೆ ಉದ್ಯಮ ಉಕ್ಕು ಮತ್ತು ಕಬ್ಬಿಣದ ಉದ್ಯಮ, ಆಹಾರ ಉತ್ಪನ್ನಗಳ ಸಂಸ್ಕರಣ ಮತ್ತು ಮಾರುಕಟ್ಟೆ ಕೃಷಿ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸುವ ಯೋಜನೆಗಳಿಗೆ ಚಾಲನೆ ನೀಡುವಂತೆ ಎಲ್ಲ ನಿಗಮ ಮಂಡಳಿ ಮತ್ತು ಸರ್ಕಾರದ ಪ್ರಮುಖ ಕಚೇರಿಗಳನ್ನು ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರಿಸಿ ಸತತವಾಗಿ ಆಡಳಿತ ಮತ್ತು ರಾಜಕೀಯ ಚಟುವಟಿಕೆಗಳು ನಡೆಸುವಂತಾಗಬೇಕು. ರೈತರಿಗೆ ಮತ್ತು ಕೃಷಿ ಕೂಲಿಕಾರರಿಗೆ ನಿರಂತರ ಉದ್ಯೋಗ ದೊರೆಯುವಂತೆ ಮಾಡಬೇಕು. ಈ ಭಾಗದಲ್ಲಿ ಉನ್ನತ ಶಿಕ್ಷಣ ಕೇಂದ್ರಗಳನ್ನು ತೆರೆದು ಉತ್ತರ ಕರ್ನಾಟಕದ ಹಿಂದುಳಿದ ಅಲ್ಪ ಸಂಖ್ಯಾತರ ಮತ್ತು ಮಹಿಳೆಯರು, ಶೋಷಿತರ ಕುಟುಂಬಗಳ ಮಕ್ಕಳುಗಳಿಗೆ ಉನ್ನತ ಪದವಿ ದೊರೆತು ಸ್ವತಂತ್ರ್ಯ ಉದ್ಯೋಗಗಳಾಗಿ ಸ್ವತಂತ್ರ ಉದ್ಯೋಗದನ್ವಯ ಸ್ವಾವಲಂಬನ ಜೀವನ ನಡೆಸುವಂತಾಗಬೇಕು. ಜನರ ಹಿತಾಸಕ್ತಿಯನ್ನು ಕಾಪಾಡುವುದರ ಮೂಲಕ ಅಖಂಡ ಕರ್ನಾಟಕದ ಕನಸು ಅಕ್ಷರಶಃ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಮನಸೂರಿನ ಬಸವರಾಜ ದೇವರು ಹಾಗೂ ಶಂಕರ ಸುಗತೆ, ಅಶೋಕ ಬಂಡಾರಿ, ಶಂಕರ ಅಂಬ್ಲಿ, ರಾಜು ಕಡೇಮನಿ, ಪುಷ್ಪಾ ಹಿರೇಮಠ, ಲಲಿತಾ ವಾಗ್ಮೋಡೆ, ಬಾಲಚಂದ್ರ ಸುರುಪುರ, ಮಹೇಶ ಪತ್ತಾರ, ಪ್ರಭು ಹಂಚಿನಾಳ ಉಪಸ್ಥಿತರಿದ್ದರು.

loading...