ಕಡೆಬಾಗಿಲು ಬುಕ್ಕಸಾಗರ ಸೇತುವೆ ರಸ್ತೆ ಬಿರುಕು: ಸ್ಥಳ ಪರಿಶೀಲಿಸಿದ ಶಾಸಕ ಪರಣ್ಣ

0
18
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ತಾಲೂಕಿನ ಆನೆಗುಂದಿ ಹತ್ತಿರ ಇರುವ ಕಡೆಬಾಗಿಲು ಬುಕ್ಕಸಾಗರ ಸೇತುವೆ ರಸ್ತೆ ಬಿರುಕು ಬಿಟ್ಟಿರುವುದರಿಂದ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ತುಂಗಭದ್ರಾ ಜಲಾಶಯದಿಂದ 1 ಲಕ್ಷಕ್ಕೂ ಹೆಚ್ಚು ಟಿಎಂಸಿ ನೀರನ್ನು ಹರಿಸಿದ ಪರಿಣಾಮದಿಂದ ಕಡೆಬಾಗಿಲು, ಬುಕ್ಕಸಾಗರ ಸೇತುವೆಯ ರಸ್ತೆ ಶುಕ್ರವಾರ ಬಿರುಕು ಬಿಟ್ಟಿತ್ತು. ಇದರಿಂದ ಜನರು ಈ ಸೇತುವೆಯ ಮುಖಾಂತರ ತೆರಳಲು ಆತಂಕಗೊಂಡಿದ್ದರು. ಹೊಸಪೇಟೆಗೆ ನೇರ ಸಂಪರ್ಕ ಕಲ್ಪಿಸುವ ಈ ಸೇತುವೆ ಗಂಗಾವತಿ ಜನರಿಗೆ ಬಹಳಷ್ಟು ಅನುಕೂಲವಾಗಿತ್ತು.ಹೊಸಪೇಟೆ, ವಿಶ್ವವಿಖ್ಯಾತ ಹಂಪಿ, ಕಮಲಾಪುರಕ್ಕೆ ಹೋಗಬೇಕೆಂದರೆ ಕಂಪ್ಲಿ ಮಾರ್ಗವಾಗಿ ತೆರಳಬೇಕಾಗಿತ್ತು. ಈ ಸೇತುವೆ ನಿರ್ಮಾಣಗೊಂಡಿರುವ ಕಾರಣದಿಂದ ಸಮಯದ ಜೊತೆ 20 ಕೀ.ಮಿ. ಅಂತರವು ಕಡಿಮೆಯಾಗಿತ್ತು.
2008 ರಲ್ಲಿ ಬಿಜೆಪಿಯಿಂದ ಆಯ್ಕೆಗೊಂಡಿದ್ದ ಪರಣ್ಣ ಮುನವಳ್ಳಿಯವರ ಅವಧಿಯಲ್ಲಿ ಈ ಸೇತುವೆ ನಿರ್ಮಾಣಕ್ಕೆ ನಬಾರ್ಡ ಯೋಜನೆಯಲ್ಲಿ 32 ಕೋಟಿ ರೂ. ಬಿಡುಗಡೆಯಾಗಿತ್ತು.ಭತ್ತದ ನಾಡಿನ ಜನರ ಬಹು ದಿನಗಳ ಕನಸು ನನಸಾಗಿತ್ತು. ಶಾಸಕರಾಗಿದ್ದ ಸಂದರ್ಭದಲ್ಲಿ ಮುನವಳ್ಳಿಯವರು ಸೇತುವೆ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಿದ್ದರು. ನಿರ್ಮಾಣ ಸಂದರ್ಭದಲ್ಲಿ ಇವರ ಅವಧಿ ಮುಗಿದ ಕಾರಣದಿಂದ ಇಕ್ಬಾಲ್ ಅನ್ಸಾರಿ ಶಾಸಕರಾಗಿ ಆಯ್ಕೆಗೊಂಡರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದ ಸಮಯದ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು.ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಟ್ಟ ಪರಿಣಾಮವಾಗಿ ಸೇತುವೆ ರಸ್ತೆಯ ಮಣ್ಣು ಕುಸಿದಿದೆ. ಇದು ನೈಸರ್ಗಿಕವಾಗಿದೆ. ಇದರಿಂದ ಗಾಬರಿಯಾಗುವ ಅವಶ್ಯಕತೆ ಇಲ್ಲ ಈ ಕುರಿತು ತುರ್ತು ದುರಸ್ಥಿಗೆ ತಾವು ಚೀಫ್ ಇಂಜನಿಯರಿಗೆ ಸೂಚನೆ ನೀಡುವುದಾಗಿ ಹೇಳಿದರು. ಅನ್ಯ ಜಿಲ್ಲೆಗಳ ಜನರು ಮತ್ತು ವಾಹನಗಳು ಸೇತುವೆ ಮೂಲಕ ಬುಕ್ಕಸಾಗರ ತಲುಪಲು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ತಿರುಮಲರಾವ್ ಕುಲಕರ್ಣಿ, ಬಿಜೆಪಿ ಮುಖಂಡರಾದ ಸಂತೋಷ ಕೆಲೋಜಿ, ಶ್ರೀಕಾಂತ ಬಾಗೋಡಿ ಇದ್ದರು.

loading...