ಕನ್ನಡ ಶಾಲೆ ಮುಚ್ಚುವ ನಿರ್ಧಾರ ಹಿಂಪಡೆಯಲು ಆಗ್ರಹ

0
4
loading...

ಕನ್ನಡಮ್ಮ ಸುದ್ದಿ-ನರಗುಂದ: ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಳ್ಳುತ್ತಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಮಠಾಧೀಶರು ಮತ್ತು ವಿವಿಧ ಕನ್ನಡಪರ ಸಂಘಟನೆ ಸದಸ್ಯರು, ಪ್ರತಿಭಟಣೆ ನಡೆಸಿ ಉಪತಹಸೀಲ್ದಾರ್ ಎಸ್. ಎ ,ಪಾಟೀಲ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಶಿಕ್ಷಣವೆಂಬುದು ವ್ಯಾಪಾರೀಕರಣವಲ್ಲ. ದಾಖಲಾತಿಯ ನೆಪವೊಡ್ಡಿ ರಾಜ್ಯದ 14,717 ಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದ್ದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಈ ಹಿಂದೆ ಸರ್ಕಾರವೇ ಯಾವುದೇ ಶಾಲೆಗಳನ್ನು ವೀಲಿನಗೊಳಿಸುವುದಿಲ್ಲವೆಂದು ಹೇಳಿಕೆ ನೀಡಿದೆ. ಈಗ ತೆರೆಯ ಮರೆಯ ಕಸರತ್ತು ನಡೆಸಿ ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳೊಡನೆ ಚರ್ಚಿಸಿ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರು ನಡೆಸಿದೆ. ಕನ್ನಡ ಶಾಲೆಗಳನ್ನು ಬಂದ್ ಮಾಡಿ ಖಾಸಗಿ ಶಾಲೆಗಳಿಗೆ ಮಣಿ ಹಾಕುವ ಕಾರ್ಯದಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ರುದ್ರನಾಥ ಕಲ್ಯಾಣಶೆಟ್ಟಿ ಮಾತನಾಡಿ, ಬಡವರ, ಕಾರ್ಮಿಕರ, ಶ್ರಮಿಕರ ಮಕ್ಕಳು ಓದುತ್ತಿರುವುದೇ ಕನ್ನಡ ಶಾಲೆಗಳಲ್ಲಿ. ಇವುಗಳನ್ನು ಸಹ ರದ್ದುಪಡಿಸಿದರೆ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಸರ್ಕಾರ ಈ ಕೆಟ್ಟ ನಿರ್ಧಾರವನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕರವೇ ವೇದಿಕೆ ತಾಲೂಕ ಘಟಕದ ಗೌರವಾಧ್ಯಕ್ಷ ರಾಘವೇಂದ್ರ ಗುಜಮಾಗಡಿ ಮಾತನಾಡಿದರು.
ಪಟ್ಟಣದ ಪುರಸಭೆ ಆವರಣದಿಂದ ಚನ್ನಮ್ಮ ವರ್ತುಲದವರೆಗೆ ಪ್ರತಿಭಟನಾ ಮೆರವಣೆಗೆ ಹಮ್ಮಿಕೊಳ್ಳಲಾಗಿತ್ತು. ಪತ್ರೀವನಮಠದ ಗುರುಸಿದ್ದಶಿವಯೋಗಿ ಶಿವಾಚಾರ್ಯರು. ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಪಂಚಗ್ರಹ ಗುಡ್ಡದ ಸಿದ್ದಲಿಂಗ ಶಿಚಾಚಾರ್ಯರು, ಸಂಕದಾಳದ ಮೈಲಾರ ಸ್ವಾಮಿಗಳು, ಎಸ್.ಆರ್. ಹಿರೇಮಠ, ಚನ್ನು ನಂದಿ, ರವಿ ಚಿಂತಾಲ, ವ್ಹಿ.ಎನ್. ಕೊಳ್ಳಿಯವರ, ಸಿ.ಎಚ್. ಕೋರಿ, ಭಾರತಿ ಹೊಂಗಲ, ಸುಧಾ ಕೋಳೇರಿ, ಭಾರತಿ ಸೂರ್ಯವಂಶಿ, ಬಸಮ್ಮ ಯಾವಗಲ್, ಫಾರೂಕ್ ಮಜೀದಮನಿ, ವಿನೋದ ವಡ್ಡರ, ಬಾಬು ಅತ್ತಾರ, ಶಿವಪ್ಪ ಯಲಿಗಾರ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಮೋಹನ ಕಲಹಾಳ ಇದ್ದರು.

loading...