ಕರುಣಾನಿಧಿ ನಿಧನದ ಹಿನ್ನೆಲೆ;ಸಂಸತ್ ಕಲಾಪ ಮುಂದೂಡಿಕೆ ಪ್ರಧಾನಿ ಮೋದಿ ಅಂತಿಮ ನಮನ

0
8
loading...

ನವದೆಹಲಿ:ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.
ಕರುಣಾನಿಧಿ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಿದ ಬಳಿಕ ಉಭಯ ಸದನಗಳ ಕಲಾಪವನ್ನ ಮುಂದೂಡಲಾಯಿತು.ಲೋಕಸಭೆಯ ಸ್ಪೀಕರ್ ಸುಮಿತ್ರ ಮಹಾಜನ್‍ಸದಸ್ಯರಿಗೆ ಸಂತಾಪ ಸೂಚನೆಗೆ ಅವಕಾಶ ಮಾಡಿಕೊಟ್ಟರು. ಈ ವೇಳೆ ಕರುಣಾನಿಧಿ ಅವರು ದಾರ್ಶನಿಕರು ಹಾಗೂ ಸಮೂಹದ ನಾಯಕರು. ಕೆಲವು ಚಿತ್ರಗಳ ಮೂಲಕವೂ ಅವರು ತಮ್ಮ ರಾಜಕೀಯ ಚಿಂತನೆಯನ್ನು ಹರಡಿದರು ಎಂದು ಸ್ಮರಿಸಿದರು.
ರಾಜ್ಯಸಭೆ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರೂ ರಾಜ್ಯಸಭೆಯಲ್ಲಿ ಸಂತಾಪ ಸೂಚಿಸಿದರು.ಕರುಣಾನಿಧಿ ಬಹುಮುಖ ವ್ಯಕ್ತಿತ್ವದವರು ಹಾಗೂ ಹಲವು ಕಷ್ಟಗಳನ್ನು ಮೆಟ್ಟಿನಿಂತವರು ಎಂದು ಬಣ್ಣಿಸಿದರು.
ಸಿನಿಮಾದಲ್ಲಿ ಸ್ಕ್ರೀನ್‍ಪ್ಲೇ ಬರಹಗಾರರಾಗಿ ಜೀವನ ಆರಂಭಿಸಿದ ಅವರು,ದ್ರಾವಿಡ ಶೈಲಿ ಹಾಗೂ ತಮಿಳು ಸಂಸ್ಕೃತಿಯಂತೆ ಸಿನಿಮಾ ಬೆಳೆಸಿದರು.ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯ ರಂಗ ಪ್ರವೇಶಿಸಿದ ಕರುಣಾನಿಧಿ,ತಮಿಳುನಾಡು ಅಸೆಂಬ್ಲಿಗೆ 13 ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದರು.1969ರಲ್ಲಿ ಮೊದಲು ಮುಖ್ಯಮಂತ್ರಿಗಳಾಗಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು ಎಂದು ನೆನಪು ಮಾಡಿಕೊಂಡರು.
ಇನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಪಕ್ಷದ ಧುರೀಣ ಕರುಣಾನಿಧಿ ನಿಧನರಾದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾರ್ಥಿವ ಶರೀರದ ದರ್ಶನ ಪಡೆದರು.
ಇಂದು ಬೆಳಗ್ಗೆ ತಮಿಳುನಾಡಿಗೆ ಬಂದಿಳಿದ ಪ್ರಧಾನಿ ಮೋದಿ,ಕರುಣಾ ಪಾರ್ಥಿವ ಶರೀರವಿರುವ ರಾಜಾಜಿಹಾಲ್‍ಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.ಈ ವೇಳೆ ದುಃಖತಪ್ತರಾದ ಕರುಣಾನಿಧಿ ಪುತ್ರ ಸ್ಟಾಲಿನ್ ಹಾಗೂ ಪುತ್ರಿ ಕನಿಮೊಳಿಗೆ ಸಾಂತ್ವನ ಹೇಳಿದರು.
ನಿನ್ನೆಯೇ ಟ್ವಿಟ್ಟರ್‍ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ,ಕಲೈಂಗ್ನರ್ ಕರುಣಾನಿಧಿ ಅವರು ನಿಧರಾಗಿರುವ ಸುದ್ದಿ ತುಂಬಾ ನೋವುಂಟು ಮಾಡಿದೆ. ಅವರು ಭಾರತದ ಹಿರಿಯ ನಾಯಕರಾಗಿದ್ದರು ಎಂದಿದ್ದರು.
ಒಬ್ಬ ಜನನಾಯಕ,ಪ್ರಗತಿಪರ ಚಿಂತಕ,ಬರಹಗಾರ ಹಾಗೂ ಬಡವರ, ದೀನ, ದಲಿತರ ಕಲ್ಯಾಣಕ್ಕಾಗಿ ಬದುಕಿನುದ್ದಕ್ಕೂ ಶ್ರಮಿಸಿದ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ.ಪ್ರಾಂತೀಯ ಹಿತಾಸಕ್ತಿ ಹಾಗೂ ದೇಶದ ಪ್ರಗತಿಗಾಗಿ ಕರುಣಾನಿದಿ ಕಂಕಣಬದ್ಧರಾಗಿ ನಿಂತಿದ್ದರು.ತಮಿಳಿಗರ ಕಲ್ಯಾಣ ಸಮಿತಿಯನ್ನು ಭದ್ರವಾಗಿ ಮುನ್ನಡೆಸಿದರು ಹಾಗೂ ತಮಿಳಿಗರ ಧ್ವನಿ ಗಟ್ಟಿಯಾಗಿ ಕೇಳಲು ಕಾರಣರಾಗಿದ್ದರು ಎಂದು ಹೇಳಿದ್ದರು.
ನನಗೆ ಕರುಣಾನಿಧಿಯವರೊಂದಿಗೆ ಹಲವು ಸಂದರ್ಭಗಳಲ್ಲಿ ಚರ್ಚಿಸುವ ಅಚಕಾಶ ಸಿಕ್ಕಿದೆ.ಯೋಜನೆಗಳ ಬಗ್ಗೆ ಹಾಗೂ ಸಾಮಾಜಿಕ ಏಳ್ಗೆಯ ಬಗ್ಗೆ ಚೆನ್ನಾಗಿ ಅರಿತಿದ್ದರು.ಪ್ರಜಾಪ್ರಭುತ್ವ ತತ್ವಗಳಿಗೆ ಬದ್ಧರಾಗಿದ್ದರು.ತುರ್ತು ಪರಿಸ್ಥಿತಿಯಲ್ಲಿ ಅವರು ಬಲವಾಗಿ ವಿರೋಧಿಸಿದ್ದು ಸ್ಮರಣಾರ್ಹ ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ,ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ. ಅವರ ಕುಟುಂಬಕ್ಕೂ ಸಾಂತ್ವನ ಹೇಳಿದ್ದಾರೆ.
ಇದೇ ವೇಳೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅಂತ್ಯಕ್ರಿಯೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ರಾತ್ರಿಯಿಡೀ ಹೈಕೋರ್ಟ್‍ನಲ್ಲಿ ನಡೆದ ವಿಚಾರಣೆ ಬಳಿಕ ತೆರೆಬಿದ್ದಿತು. ಚೆನ್ನೈನ ಮರೀನಾ ಬೀಚ್‍ನಲ್ಲಿಯೇ ಕರುಣಾನಿಧಿ ಅವರ ಅಂತ್ಯಕ್ರಿಯೆ ನಡೆಸುವಂತೆ ಕೋರ್ಟ್ ತೀರ್ಪು ನೀಡಿತು.ಏತನ್ಮಧ್ಯೆ ಬಸ್, ಕಾರು ಸೇರಿದಂತೆ ವಾಹನಗಳ ಮೇಲೆ ಕಲ್ಲುತೂರಾಟ ನಡೆದಿದ್ದು ಹಿಂಸಾಚಾರ ಉಂಟಾಗಿದೆ.
ತಮಿಳುನಾಡಿನಾದ್ಯಂತ 80 ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ ಎನ್ನಲಾಗುತ್ತಿದೆ.ಹಿಂಸಾಚಾರ,ನೂಕುನುಗ್ಗಲಿನ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದು, ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.ಹಿಂಸಾಚಾರದಲ್ಲಿ ಈವರೆಗೂ 7ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರುಣಾನಿಧಿ ಅವರ ಪಾರ್ಥಿವ ಶರೀರದ ದರ್ಶನ ಪಡೆಯಲು ರಾಜಾಜಿನಗರದತ್ತ ಜನರು ತಂಡೋಪತಂಡವಾಗಿ ಆಗಮಿ ಸುತ್ತಿದ್ದು,ಬ್ಯಾರಿಕೇಡ್‍ಗಳನ್ನು ಮುರಿದು ಒಳನುಗ್ಗುತ್ತಿದ್ದಾರೆ.ಇದರಿಂದಾಗಿ ಪೊಲೀಸರು ಜನರನ್ನು, ಅಭಿಮಾನಿಗಳನ್ನು, ನಿಯಂತ್ರಿ ಸಲು ಲಘು ಲಾಠಿಪ್ರಹಾರ ನಡೆಸಿದ್ದಾರೆ.ಇನ್ನು ಮರೀನಾ ಬೀಚ್ ಬಳಿಯ ಪೆರಿಯಾರ್ ಪುತ್ಥಳಿ ಬಳಿ ಕಾಲ್ತುಳಿತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

loading...