ಕಾಮಗಾರಿ ಗುತ್ತಿಗೆ ಪಡೆದವರಿಂದ ನಿರ್ಲಕ್ಷ್ಯ: ಅಭಿವೃದ್ಧಿ ಕುಂಠಿತ

0
17

ಕನ್ನಡಮ್ಮ ಸುದ್ದಿ-ನರಗುಂದ: ಸರ್ಕಾರ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕೆನ್ನುವ ಮಹೋನ್ನತ ಗುರಿಯೊಂದಿಗೆ ಆಯಾ ಗ್ರಾಪಂಗೆ ನೇರವಾಗಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಕಾಮಗಾರಿ ಗುತ್ತಿಗೆ ಪಡೆದವರು ನಿರ್ಲಕ್ಷ್ಯಮಾಡಿದ್ದಕ್ಕೆ ತಾಲೂಕಿನ ಹಿರೇಕೊಪ್ಪ ಗ್ರಾಮವೇ ಸಾಕ್ಷಿ.
ಗ್ರಾಮ ವಿಕಾಸ ಯೋಜನೆಯಡಿ ಹಿರೇಕೊಪ್ಪ ಗ್ರಾಮ ಸುಧಾರಣೆಗೆ 2016 ರಲ್ಲಿ ಸುಮಾರು 75 ಲಕ್ಷರೂ. ವೆಚ್ಚದಲ್ಲಿ ಗ್ರಾಮದ ಪ್ರಮುಖ ಭಾಗಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಬಾಬಾಸಾಹೇಬರ ಬಲಗೈ ಬಂಟ ವಿಷ್ಣುಪಂಥನು ಆಳ್ವಿಕೆ ನಡೆಸಿದ್ದ ಅವರ ಕಾಲದ ಅಠಾರಾ ಕಚೇರಿಗಳನ್ನು ಸೇರಿ ವಿವಿಧ ಕಾಮಗಾರಿಯನ್ನು ಅಭಿವೃದ್ಧಿಗೊಳಿಸಲು ಮುಂಡರಗಿಯ ಆರ್. ಎಸ್.ಪಾಟೀಲ ಎಂಬುವರಿಗೆ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿತ್ತು.
ಸಿಸಿ ರಸ್ತೆ ನಿರ್ಮಾಣಕ್ಕಾಗಿ ಮೀಸಲಿದ್ದ ಒಟ್ಟು 37 ಲಕ್ಷರೂ. ಅನುದಾನದಲ್ಲಿ ಕೇವಲ 10 ಲಕ್ಷರೂ. ಸಿಸಿ ರಸ್ತೆ ಕಾಮಗಾರಿ ಮತ್ತು 9 ಲಕ್ಷರೂ. ಶಾಲಾ ಕಂಪೌಂಡ ಗೋಡೆ ಮಾತ್ರ ಇದೂವರೆಗೆ ನಿರ್ಮಿಸಿದ್ದಾರೆ.
ಗ್ರಾಮದ ಗ್ರಂಥಾಲಯ ಕಟ್ಟಡಕ್ಕೆ ಜಾಗೆ ಇದ್ದರೂ ಸಹ 6.5 ಲಕ್ಷರೂ. ವೆಚ್ಚದಲ್ಲಿ ಹೊಸ ಗ್ರಂಥಾಲಯ ಕಟ್ಟಡ ನಿರ್ಮಿಸಲು ಗುತ್ತಿಗೆದಾರರು ನಿರ್ಲಕ್ಷ್ಯ ಮಾಡಿದ್ದಾರೆ. ವಿಷ್ಣು ಪಂಥ ಅವರ ಅಠಾರಾ ಕಚೇರಿಯನ್ನು ಅವರ ಸ್ಮಾರಕದ ನೆನಪಿನಲ್ಲಿ ಸಭಾಭವನ ನಿರ್ಮಿಸಲು 2.5 ಲಕ್ಷರೂ. ತೆಗೆದಿರಿಸಿದ್ದರೂ ಕೂಡಾ ಕಾಮಗಾರಿ ನಡೆಸಿಲ್ಲ.
ಗ್ರಾಮದ ಕೆಲವು ಸಿಸಿ ರಸ್ತೆ, ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ ನಿರ್ಮಾಣ, ಒಂದು ದೇವಸ್ಥಾನದ ನವೀಕರಣದ ಕಾಮಗಾರಿಯನ್ನು ಮಾತ್ರ ಗುತ್ತಿಗೆದಾರರು ಪೂರ್ಣಮಾಡಿದ್ದು, ಇನ್ನೂಳಿದ ಕೆಲಸಗಳನ್ನು ಎರಡು ವರ್ಷ ಗತಿಸಿದರೂ ನಿರ್ವಹಿಸಲು ಮುಂದಾಗಿಲ್ಲ. ಇದರಿಂದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ.
ಹಿರೇಕೊಪ್ಪ ಗ್ರಾಪಂ ಪಿಡಿಒ ಎಸ್.ಎನ್.ಅರಳಿಕಟ್ಟಿ ಪ್ರತಿಕ್ರಿಯಿಸಿ, 2016ನೇ ಸಾಲಿನಲ್ಲಿಯೇ ಗ್ರಾಮದ ಅಭಿವೃದ್ಧಿಗಾಗಿ ಒಟ್ಟು 75 ಲಕ್ಷರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ಮೂರು ಮಂದಿರಗಳ ನವೀಕರಣ ಕಾಮಗಾರಿಗಾಗಿ ಟೆಂಟರ್ ಕರೆದು ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರ ಕಾಮಗಾರಿಗಳನ್ನು ಅರ್ಧ ಭಾಗ ಮಾತ್ರ ಮಾಡಿದ್ದಾನೆ. ಬಾಕಿ ಉಳಿದ ಕಾಮಗಾರಿಯನ್ನು ಇದುವರೆಗೆ ಕೈಗೊಂಡಿಲ್ಲ. ಹೀಗಾಗಿ ಕಳೆದ ತಿಂಗಳು ನಡೆದ ಗ್ರಾಪಂ ಸದಸ್ಯರ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಂಡು ಅವರ ಗುತ್ತಿಗೆ ಲೈಸನ್ಸ್ ರದ್ದು ಪಡಿಸಿ ಕಪ್ಪು ಪಟ್ಟಿಗೆ ಸೇರಿಸುವಂತೆ ಒಮ್ಮತದ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

loading...