ಕಿಮ್ಸ್‍ನಲ್ಲಿ ನರ್ಸ್ ಕೌಶಲ ಕೇಂದ್ರ ಆರಂಭ

0
19
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಹೃದಯಾಘಾತ, ಅಪಘಾತದಂತಹ ಗಂಭೀರ ಸ್ಥಿತಿಯಲ್ಲಿ ರೋಗಿಗಳ ಮರಣ ಸಂಖ್ಯೆಗೆ ಕಡಿವಾಣ ಹಾಕಲು ಪ್ರಾಥಮಿಕ ಚಿಕಿತ್ಸೆ ನೀಡುವ ನರ್ಸ್‍ಗಳಲ್ಲಿ ಕೌಶಲ ಹೆಚ್ಚಿಸಲು ಕರ್ನಾಟಕದಲ್ಲೇ ಮೊದಲ ನರ್ಸ್ ಕೌಶಲಾಭಿವೃದ್ಧಿ ಕೇಂದ್ರ ನಗರದಲ್ಲಿ ಆರಂಭವಾಗಲಿದೆ.
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಯಲ್ಲಿ ನರ್ಸ್ ಕೌಶಲ ಕೇಂದ್ರ ತೆರೆಯಲು ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ್ದು, 1.40 ಕೋಟಿ ರೂ. ಮಂಜೂರು ಮಾಡಿದೆ. ಕೇಂದ್ರವು ಒಟ್ಟು 3 ಕೋಟಿ ರೂ. ಯೋಜನಾ ವೆಚ್ಚ ಹೊಂದಿದೆ. ಕೇಂದ್ರ ಸರಕಾರದ ಆರೋಗ್ಯ ಅಭಿವೃದ್ಧಿ ಯೋಜನೆಯಡಿ 6 ತಿಂಗಳ ಹಿಂದೆ ಕಿಮ್ಸ್ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದ ಅಧಿಕಾರಿಗಳು, ಒಂದೂವರೆ ತಿಂಗಳ ಹಿಂದೆಯಷ್ಟೇ ಕಿಮ್ಸ್‍ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
ಕಿಮ್ಸ್‍ನ ಲೈಬ್ರರಿ ಕಟ್ಟಡದ ಮೇಲೆ 4 ಸಾವಿರ ಚದರ ಅಡಿಯಷ್ಟು ಸ್ಥಳ ಕಾಯ್ದಿರಿಸಲಾಗಿದೆ. ಕೌಶಲ ತರಬೇತಿಗೆ ಬೇಕಾದ ಸಲಕರಣೆಗಳು ಮತ್ತು ಕಟ್ಟಡದ ವಿನ್ಯಾಸದ ಬಗ್ಗೆ ಆರೋಗ್ಯ ಎಂಜಿನಿಯರಿಂಗ್ ವಿಭಾಗವು ಮಾಹಿತಿ ನೀಡಿದ ಬಳಿಕ ಕಾಮಗಾರಿ ಶುರುವಾಗಲಿದೆ. ಕೇಂದ್ರದ ಆಗು-ಹೋಗುಗಳ ಮೇಲೆ ನಿಗಾ ವಹಿಸಲು ಡಾ.ಮೂಲಿಮನಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಕಿಮ್ಸ್ ನಿರ್ದೇಶಕರು ಹೇಳಿದರು. ಆಂಬ್ಯುಲೆನ್ಸ್‍ದಲ್ಲಿ ರೋಗಿಗಳನ್ನು ಕರೆ ತರುವಾಗ ಇಲ್ಲವೇ ಅಪಘಾತದ ಸ್ಥಳದಲ್ಲಿ ರೋಗಿಗಳು ಉಸಿರಾಟ, ಶ್ವಾಸಕೋಶ ಸಮಸ್ಯೆ, ಹೃದಯಸ್ತಂಭನ, ತಲೆಯಿಂದ ರಕ್ತಸ್ತಾವ ಸೇರಿದಂತೆ ನಾನಾ ತೊಂದರೆಯಿಂದ ಜೀವನ್ಮರಣ ಮಧ್ಯೆ ಹೋರಾಡುತ್ತಿರುತ್ತಾರೆ. ಈ ವೇಳೆ ಅರವಳಿಕೆ ಅನುಪಸ್ಥಿತಿಯ ಮಧ್ಯೆಯೂ ರೋಗಿಗಳಿಗೆ ನಿಗದಿತ ಸ್ಥಳದಲ್ಲಿಯೇ ನಳಿಕೆಗಳನ್ನು ಅಳವಡಿಸಿ ತತ್‍ಕ್ಷಣ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆ ತರುವುದರಿಂದ ಆ ರೋಗಿ ಬದುಕುಳಿಯಬಹುದು. ಆದರೆ ಎಲ್ಲ ಸಲಕರಣೆಗಳಿದ್ದರೂ ಜ್ಞಾನಯುಕ್ತ ಕೌಶಲದೊಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿಲ್ಲ. ಹೀಗಾಗಿ ಬಹಳಷ್ಟು ಪ್ರಕರಣಗಳಲ್ಲಿ ರೋಗಿಗಳು ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಮರಣ ಹೊಂದುತ್ತಾರೆ. ಈ ಮರಣಗಳ ಸಂಖ್ಯೆ ತಡೆಯಲು ನರ್ಸ್‍ಗಳಿಗೆ ಇನ್ನಷ್ಟು ಕೌಶಲ ಬೆಳೆಸಲು ತರಬೇತಿ ಅವಶ್ಯವಿದೆ. ಈ ತರಬೇತಿ ನೀಡುವ ವ್ಯವಸ್ಥೆ ಸದ್ಯ ರಾಜ್ಯದ ಯಾವುದೇ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಇಲ್ಲ. ಹೀಗಾಗಿ ಈ ಕೇಂದ್ರ ತೆರೆಯಲಾಗುತ್ತಿದೆ ಎಂದು ನಿರ್ದೇಶಕ ವಿವರಿಸಿದರು.
ಈ ಕೇಂದ್ರದಲ್ಲಿ ಮಾನವಾಕೃತಿಯ (ಮಾನವ ತದ್ರೂಪಿ) ನಿರ್ಜಿವ ವಸ್ತುಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೂ ಮುನ್ನ ಕೇಂದ್ರಕ್ಕೆ ಬೇಕಾದ ಎಂಜಿನಿಯರಿಂಗ್ ಪರಿಕರ ಜೋಡಿಸಬೇಕಾಗಿದ್ದು, ಆರೋಗ್ಯ ಎಂಜಿನಿಯರ್‍ಗಳು ಪ್ರಕ್ರಿಯೆ ಆರಂಭಿಸಿದ್ದು, 3-4 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ ಕೌಶಲ ತರಬೇತಿ ನೀಡಲು ಕಿಮ್ಸ್ ನಾಲ್ವರು ವೈದ್ಯರು ಎಐಎಂಎಸ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ತರಬೇತಿ ಪಡೆದಿದ್ದು, ಅವರು ನರ್ಸ್‍ಗಳಿಗೆ ಹೆಚ್ಚಿನ ಟ್ರೇನಿಂಗ್ ನೀಡಲಿದ್ದಾರೆ. ಮೊದಲ ಆದ್ಯತೆ ಮೇಲೆ ಕಿಮ್ಸ್, ತದನಂತರ ಪ್ರಾಥಮಿಕ ಹಾಗೂ ತಾಲೂಕು ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆಸ್ಪತ್ರೆ ನರ್ಸ್‍ಗಳಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಪ್ರತಿ ಬ್ಯಾಚ್‍ದಲ್ಲಿ ಗರಿಷ್ಠ 30 ನರ್ಸ್‍ಗಳಿಗೆ ತರಬೇತಿ ಕೊಡಲಾಗುತ್ತದೆ ಎನ್ನುತ್ತಾರೆ.

loading...