ಕೇರಳ ರಾಜ್ಯಕ್ಕೆ ರೂ.500 ಕೋಟಿ ಮಧ್ಯಂತರ ಪರಿಹಾರವನ್ನು ಘೋಷಿಸಿದ ಪ್ರಧಾನಿ ಮೋದಿ

0
9
loading...

ತಿರುವನಂತಪುರ: ನೂರಾರು ಮಂದಿಯನ್ನು ಬಲಿಪಡೆದುಕೊಂಡು, ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿರುವ ಕೇರಳದ ಮುಂಗಾರು ಮಳೆಯ ಪ್ರಕೋಪವನ್ನು ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೇರಳ ರಾಜ್ಯಕ್ಕೆ ರೂ.500 ಕೋಟಿ ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಕಳೆದೊಂದು ಶತಮಾನದಲ್ಲಿಯೇ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಕೇರಳದಲ್ಲಿ ಮಳೆರಾಯ ಇನ್ನೂ ಮುಂದುವರೆದಿದ್ದು, ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಿಗ್ಗೆ ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿಯವರು ಕೇರಳ ರಾಜ್ಯಕ್ಕೆ ರೂ.500 ಮಧ್ಯಂತರ ಪರಿಹಾರ ಹಾಗೂ ಮೃತಪಟ್ಟಿವರಿಗೆ ರೂ.2 ಲಕ್ಷ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ವೈಮಾನಿಕ ಸಮೀಕ್ಷೆ ನಡೆಸಲು ಮುಂದಾಗಿದ್ದ ಪ್ರಧಾನಿ ಮೋದಿಯವರಿಗೆ ಪ್ರತಿಕೂಲ ಹವಾಮಾನ ಎದುರಾಗಿದ್ದು. ಹೀಗಾಗಿ ವೈಮಾನಿಕ ಸಮೀಕ್ಷೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು. ಬಳಿಕ ಹವಾಮಾನ ಸುಧಾರಿಸಿದ ಹಿನ್ನಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಕೂಡಲೇ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ.
ಕೇರಳದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 106 ಮಂದಿ ಪ್ರಾಣ ತೆತ್ತಿದ್ದಾರೆ. ಇದರಿಂದಾಗಿ ಕೇವಲ ಆ.8ರಿಂದ ಈ ವರೆಗೆ ಅಂದರೆ ಕೇವಲ 10 ದಿನಗಳಲ್ಲಿ ಕೇರಳದ ಮಾರಣಾಂತಿಕ ಮಳೆ, ಪ್ರವಾಹ ಹಾಗೂ ಭೂ ಕುಸಿತಕ್ಕೆ ಬಲಿಯಾದವರ ಸಂಖ್ಯೆ 173ಕ್ಕೆ ಏರಿಕೆಯಾಗಿದೆ. ಮಳೆಗಾಲ ಆರಂಭವಾದಾಗಿನಿಂದ ಈವರೆಗೂ 324 ಮಂದಿ ಜೀವಹರಣವಾಗಿದೆ.
ಕೇರಳದ 14 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಅತ್ಯಧಿಕ ಅಪಾಯದ ಸಂಕೇತವಾದ ರೆಡ್ ಅಲರ್ಟ್ ಸಾರಲಾಗಿತ್ತು. ಇದೀಗ ಪಠಾಣಂತಿಟ್ಟ, ಅಲಪ್ಪುಳ್ಳ, ಎರ್ನಾಕುಲಂ ಹಾಗೂ ತ್ರಿಶ್ಯೂರಿನಂತರ ನಾಲ್ಕು ಜಿಲ್ಲೆಗಳಲ್ಲಿ ಅಪಾಯದ ಸ್ಥಿತಿ ಇದ್ದು, ಈ ಜಿಲ್ಲೆಗಳ ಸರಾರಿ 20 ಸೆಂ.ಮೀ ಮಳೆ ಸುರಿಯುತ್ತಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಜನಜೀವನ ಹೈರಾಣಾಗಿದೆ.

loading...