ಕೊಡಗು ನೆರೆ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ

0
7
loading...

ಬೆಂಗಳೂರು:ಮೈಸೂರಿನ ಸುತ್ತೂರು ಶ್ರೀ ವೀರಸಿಂಹಾಸನ ಮಠಕ್ಕೆ ಆಗಮಿಸಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಶ್ರೀ ಚನ್ನವೀರ ಗುರುಕುಲದ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿ ಸುತ್ತೂರಿನ ಮೂಲ ಗದ್ದುಗೆಗೆ ಭೇಟಿ ನೀಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಸಿದ್ದಲಿಂಗ ಸ್ವಾಮೀಜಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಜಿ.ಟಿ.ದೇವೇಗೌಡ, ಪುಟ್ಟರಂಗಶೆಟ್ಟಿ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹಾಜರಿದ್ದರು.
ಇದಕ್ಕು ಮುನ್ನ ಕೊಡಗು ನೆರೆ ಪರಿಸ್ಥಿತಿಗೆ ಮಿಡಿದ ಸುತ್ತೂರು ಶ್ರೀ ವೀರಸಿಂಹಾಸನ ಮಠ ಕೊಡಗು ಜಿಲ್ಲೆಯ ನೆರೆ ಪರಿಹಾರ ನಿಧಿಗೆ 50 ಲಕ್ಷವನ್ನು ದೇಣಿಗೆಯಾಗಿ ನೀಡಿದೆ. ಅಲ್ಲದೆ ಕೇರಳ ರಾಜ್ಯಕ್ಕೆ 10 ಲಕ್ಷ ರೂ.ದೇಣಿಗೆ ನೀಡಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ವೇದಿಕೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚೆಕ್ ಹಸ್ತಾಂತರ ಮಾಡಿದರು.
ಸುತ್ತೂರು ಮಠ, ಜೆಎಸ್‍ಎಸ್ ಸಂಸ್ಥೆಗಳಲ್ಲಿ ಪ್ರತಿ ವರ್ಷ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು.ಈ ಬಾರಿ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಬಂದಿರುವ ಹಿನ್ನೆಲೆಯಲ್ಲಿ ಸರಳವಾಗಿ ಜಯಂತಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ದೇಶಿ ಕೇಂದ್ರ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ಅನ್ನ, ಅಕ್ಷರ ದಾಸೋಹ ನೀಡುತ್ತಿರುವ ಸುತ್ತೂರು ಕ್ಷೇತ್ರ ಬೃಹತ್ ಧಾರ್ಮಿಕ ಕ್ಷೇತ್ರವೂ ಆಗಿದೆ. ಶ್ರೀ ಕ್ಷೇತ್ರದ ಸ್ವಾಮೀಜಿ ಅವರು ಕೊಡಗು ಜಿಲ್ಲೆಯ ಅನಾಹುತಕ್ಕೆ 50 ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. ಅಲ್ಲದೆ, ಕೇರಳ ನೆರೆ ಸಂತ್ರಸ್ತರ ನೆರವಿಗೂ 10 ಲಕ್ಷ ರೂ. ಚೆಕ್ ನೀಡಲಾಗಿದೆ.ತಮಿಳುನಾಡಿನಲ್ಲಿ ಸುನಾಮಿ ಸಂಭವಿಸಿದಾಗಲೂ ರಾಜ್ಯ ಸ್ಪಂದಿಸಿತ್ತು.ಕೊಡಗು, ಕೇರಳ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತಿತರ ಕಡೆಗಳಲ್ಲಿ ಅತಿವೃಷ್ಟಿಯಿಂದ ಜನರು ಸಂಕಷ್ಟದಲ್ಲಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಚಾಮುಂಡೇಶ್ವರಿ ಕೃಪೆಯಿಂದ ಮಳೆ, ಬೆಳೆಯಾಗಿ ನಾಡಿನ ಜನತೆ ನೆಮ್ಮದಿಯಿಂದ ಬದುಕುವಂತಾಗಬೇಕೆಂದು ಕೋರಿದರು. ಸುತ್ತೂರು ಮಠ ದೇಶ-ವಿದೇಶದಲ್ಲಿ ಉತ್ತಮ ಹೆಸರು ಪಡೆದಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಸುತ್ತೂರು ಮಠಕ್ಕೆ ವಿಶೇಷವಾದ ಸ್ಥಾನಮಾನವಿದೆ. ಸುತ್ತೂರು ಮಠಕ್ಕೂ ನಮ್ಮ ಕುಟುಂಬಕ್ಕೂ ಗುರು-ಶಿಷ್ಯರ ಸಂಬಂಧವಿದೆ ಎಂದು ಹೇಳಿದರು.

loading...