ಕೊಪ್ಪಳದಲ್ಲಿ ಟೂರಿಸಂ ಅಧ್ಯಯನ ಸಂಸ್ಥೆ ಆರಂಭಕ್ಕೆ ಸಂಸದ ಸಂಗಣ್ಣ ಕರಡಿ ಒತ್ತಾಯ

0
4
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ನೂರಾರು ಪ್ರವಾಸಿತಾಣ, ಐತಿಹಾಸಿಕ, ಪೌರಾಣಿಕ ಸ್ಥಳಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯು ಎಲ್ಲಾ ದೃಷ್ಟಿಯಿಂದ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದ್ದು, ನಗರದಲ್ಲಿ ಭಾರತೀಯ ಪ್ರವಾಸೋದ್ಯಮ ಮತ್ತು ಪ್ರವಾಸಿ ಅಧ್ಯಯನ ಸಂಸ್ಥೆ ಆರಂಭಿಸುವಂತೆ ಸಂಸದ ಸಂಗಣ್ಣ ಕರಡಿ ಕೇಂದ್ರ ಪ್ರವಾಸೋದ್ಯಮ ಸಚಿವ ಎಸ್.ಎಚ್. ಅಲ್ಫಾನ್ಸ್ ಕನ್ನಾಅನಂತರಾಜ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ನವದೆಹಲಿ ಸಚಿವರನ್ನು ಭೇಟಿಯಾಗಿ ಸಲ್ಲಿಸಿರುವ ಮನವಿಪತ್ರದಲ್ಲಿ ರಾಮಾಯಣ ಕಾಲದಲ್ಲಿ ಹನುಮಂತ ಜನಿಸಿದ ಎನ್ನಲಾದ ಅಂಜನಾದ್ರಿ ಪರ್ವತ, ವಿಜಯನಗರ ಅರಸರ ಕಾಲದ ಆನೆಗೊಂದಿ, ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ದೇಶದ 27 ಐತಿಹಾಸಿಕ ಸ್ಥಳಗಳು ಸೇರಿದ್ದು, ಆ ಪೈಕಿ ಕರ್ನಾಟಕದ ಹಂಪಿಯೂ ಸಹ ಪಕ್ಕದಲ್ಲೇ ಇದೆ. ಪಕ್ಕದ ಐಹೊಳೆ, ಬದಾಮಿ, ಪಟ್ಟದಕಲ್ಲು, ತುಂಗಭದ್ರಾ ಜಲಾಶಯ, ಪೌರಾಣಿಕ ಪ್ರಸಿದ್ಧ ಹುಲಿಗೆಮ್ಮದೇವಿ ದೇವಸ್ಥಾನ, ಇಟಿಗಿ ಭೀಮಾಂಬಿಕ ದೇವಾಲಯ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ, ವಾಲಿ ಪರ್ವತ, ಶಬರಿ ನಾಡು ಪಂಪಾ ಸರೋವರ ಸೇರಿದಂತೆ ನೂರಾರು ಐತಿಹಾಸಿಕ, ಪೌರಾಣಿಕ ಪ್ರಸಿದ್ಧವಾದ ಪ್ರವಾಸಿ ತಾಣಗಳು ಜಿಲ್ಲೆಯ ಸುತ್ತಮುತ್ತಲೂ ಇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫಾನ್ಸ್ ಕನ್ನಾಅನಂತರಾಜ್, ಈ ಕುರಿತು ಸಾಧಕಬಾಧಕಗಳನ್ನು ಪರಿಶೀಲಿಸಿ ಶೀಘ್ರದಲ್ಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಪತ್ರಿಕೆಗೆ ತಿಳಿಸಿದ್ದಾರೆ.

loading...