ಗದುಗಿನಲ್ಲಿ ಪರ-ವಿರೋಧದ ಹೋರಾಟ: ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

0
10
loading...

ಕನ್ನಡಮ್ಮ ಸುದ್ದಿ-ಗದಗ : ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯವಾಗಬೇಕೆಂದು ಕಳಸಾ ಬಂಡೂರಿ ಹಾಗೂ ಮಲಪ್ರಭ ಜೋಡಣಾ ಹೋರಾಟ ಸಮಿತಿ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಅದೇ ಸ್ಥಳದಲ್ಲಿ ಕರ್ನಾಟಕ ಅಖಂಡತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಂಡು ಅಭಿವೃದ್ಧಿ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಹೆಚ್. ಶಿವರಾಮೇಗೌಡರ ಬಣ) ಗದಗ ಜಿಲ್ಲಾ ಘಟಕ ಜೈ ಭೀಮ ಸೇನಾ ಸಂಘರ್ಷ ಸಮಿತಿ ಗದಗ ಜಿಲ್ಲೆ ಹಾಗೂ ಕನ್ನಡ ಪರ ಸಂಘಟನೆಗಳು, ರೈತಪರ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿದವು.
ದಶಕಗಳ ಕಾಲದಿಂದ ಉತ್ತರ ಕರ್ನಾಟಕದ 13 ಜಿಲ್ಲೆಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ರಾಜಕೀಯ ಜನಪ್ರತಿನಿಧಿಗಳ ನಿರ್ಲಕ್ಷಧೋರಣೆಯ ಮನೋಭಾವನೆಯಿಂದಾಗಿ ಶೈಕ್ಷಣಿಕ, ಸಾಮಾಜಿಕ, ಕೃಷಿ, ಕುಡಿಯುವ ನೀರು ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳು ಬಹು ವರ್ಷಗಳಿಂದ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ ಅದಕ್ಕೆ ಜೀವಂತ ಉದಾಹರಣೆ ಕಳಸಾ ಬಂಡೂರಿ ಮಹದಾಯಿ ಯೋಜನೆ. ಆದ್ದರಿಂದ ಉ.ಕ ಸರ್ವತೋಮುಖ ಏಳ್ಗೆಗಾಗಿ ಪ್ರತ್ಯೇಕ ರಾಜ್ಯದ ಅವಶ್ಯಕತೆಯಿಂದ ಇದೆ ಎಂದು ಪ್ರತಿಪಾದಿಸಿದ ಕಳಸಾ ಬಂಡೂರಿ ಹಾಗೂ ಮಲಪ್ರಭ ಜೋಡಣಾ ಹೋರಾಟ ಸಮಿತಿಯ ಕೇಂದ್ರ ಸಮಿತಿಯ ಅಧ್ಯಕ್ಷ ವಿಜಯ ಕುಲಕರ್ಣಿ, ಜಿಲ್ಲಾ ಸಂಚಾಲಕ ವಸಂತ ಪಡಗದ ಹಾಗೂ ಸಮಿತಿಯ ಪದಾಧಿಕಾರಿಗಳು ಸದಸ್ಯರು ಗದಗ ಮಹಾತ್ಮಾ ಗಾಂಧಿ ಸರ್ಕಲ್‍ದಲ್ಲಿ ಪ್ರತಿಭಟನೆ ಕೈಗೊಂಡು ಗದಗ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಖಂಡತೆಯ ಮಂತ್ರ: ಮಹಾತ್ಮಾಗಾಂಧಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಖಂಡಿಸಿ ಕರ್ನಾಟಕ ಏಕೀಕರಣದ ಸವಿನೆನಪಿಗಾಗಿ ಅಖಂಡತೆಯ ಸಂಭ್ರಮಕ್ಕೆ ‘ಕನ್ನಡಮ್ಮನ ಜಾತ್ರೆ’ ನಡೆಸಲಾಯಿತು. ಈ ಕನ್ನಡಮ್ಮನ ಜಾತ್ರೆಯನ್ನು ಅಖಂಡ ಕರ್ನಾಟಕದ ಏಕೀಕರಣದ ಹೋರಾಟಗಾರರಾದ ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ದಿ. ಅಂದಾನಪ್ಪ ದೊಡ್ಡಮೇಟಿಯವರ ಕಲ್ಪನೆಯಲ್ಲಿ ಕೊಡುಗೆಯಾಗಿ ಕೊಟ್ಟ ಆ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ನುಡಿನಮನ ಸಲ್ಲಿಸಿ ಅಖಂಡತೆಯ ಮಂತ್ರ ಜಪಿಸಲಾಯಿತು.
ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಕನ್ನಡ ಜಾಗೃತ ಹಾಡುಗಳನ್ನು ಹಾಡಿದರು. ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಪರ್ವತಗೌಡ್ರ ಮಾತನಾಡಿ, ಈ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ರಾಜಕೀಯ ಪ್ರೇರಿತವಾಗಿದ್ದು, ಕೆಲ ರಾಜಕೀಯ ಪಕ್ಷಗಳ ಮುಖಂಡರುಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಇಂತಹ ಹೋರಾಟಗಳನ್ನು ನಡೆಸುತ್ತಿದ್ದಾರೆ. ಅಖಂಡ ಕರ್ನಾಟಕ ಒಂದು ಒಗ್ಗಟ್ಟಿನ ಸಂಕೇತವಾಗಿದ್ದು ಅಂದು ಅಖಂಡ ಕರ್ನಾಟಕಕ್ಕಾಗಿ ಸಾವಿರಾರು ಜನ, ಲಕ್ಷಾಂತರ ಜನ, ತಮ್ಮ ತನು, ಮನ, ಧನಗಳಿಂದ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ಎಷ್ಟೋ ಜನ ಈ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟು ತಮ್ಮ ಪ್ರಾಣ ತ್ಯಾಗ ಮಾಡಿ ಕಟ್ಟಿದ ಪ್ರತಿಫಲ ನಾಡು ಅಖಂಡ ಕರ್ನಾಟಕ ಎಂದರು.
ನಮ್ಮ ಈ ನಾಡಿಗಾಗಿ ನಮ್ಮ ಪ್ರಾಣ ತ್ಯಾಗ ಮಾಡಿಯಾದರೂ ಈ ನಾಡನ್ನು ಒಡೆಯಲು ನಾವು ಬಿಡುವುದಿಲ್ಲ. ಈ ಅಖಂಡ ಕರ್ನಾಟಕ ಒಡೆಯುವ ಪ್ರಶ್ನೆಯೇ ಇಲ್ಲ ಎಂದರು.
ದಾವಲ ಮುಳಗುಂದ ಮಾತನಾಡಿ, ಅಖಂಡತೆಯ ನಮ್ಮ ಗುರಿ ಮತ್ತ ಧ್ಯೇಯ ಇಂತಹ ಅಖಂಡತೆ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಒಡೆಯಲು ಬಿಡುವುದಿಲ್ಲ ಎಂದರು.
ಹರಪನಹಳ್ಳಿ ಮುಂಡರಗಿ, ಬಸವರಾಜ ದೇಸಾಯಿ, ಬಸವರಾಜ ಮುಳ್ಳಾಳ, ಮಂಜುನಾಥ ಹುಣಸೀಮರದ, ಮಂಜುಳಾ ಕೊರಕನವರ, ಪ್ರಶಾಂತ ಗೌಡರ, ಬಸಯ್ಯ ಗುಡ್ಡಿಮಠ, ಸಂತೋಷ ಕುಂಬಾರ, ಮಂಜುನಾಥ ಕುರ್ತಕೋಟಿ, ಫಕೀರಸಾಬ ನದಾಫ, ಶ್ರೀನಿವಾಸ ಬಳ್ಳಾರಿ, ಸಂತೋಷ ಕೊಣ್ಣೂರ, ಶರಣಪ್ಪ ಪೂಜಾರ, ಚಂದ್ರಯ್ಯ ಕಾಶಿಮಠ, ಮಾಬುಬಿ ನದಾಫ, ಮಲ್ಲಮ್ಮ, ದಾವಲಬಿ ಕಂದಗಲ್ಲ, ಶೈನಾಜ ಎಲಿಗಾರ, ಗಿರಿಜವ್ವ ಕರಿಯಲ್ಲಪ್ಪನವರ, ನೀಲಮ್ಮ ಕುಂಬಾರ, ಪುಷ್ಪಲತಾ ಮಾಡಲಗೇರಿ, ಸವಿತಾ ಕುರಿಗಾರ, ರಾಘವೇಂದ್ರ ಪರಸಪ್ಪ ಪರಾಪೂರ, ಮಂಜುನಾಥ ಎಪ್. ತೌಜಲ, ಪರಶುರಾಮ ಎಲ್ ಸಂಗಾಪೂರ, ಬಸವರಾಜ ಬದಾಮಿ, ಜೊಸೆಫ್, ಶ್ರೀಧರ ಜಕ್ಕಲಿ, ವಿರುಪಾಕ್ಷ ಸಂಗಾಪೂರ, ಮರಿಯಪ್ಪ ಪರಾಪೂರ, ಹೇಮಂತ ಹುಬ್ಬಳ್ಳಿ, ಮಂಜುನಾಥ ಪರಾಪೂರ, ವಿಜಯ ಪೂಜಾರ ಇದ್ದರು. ಗದಗ ಜಿಲ್ಲಾ ಕೇಂದ್ರದಲ್ಲಿ ಎಂದಿನಂತೆ ಶಾಲಾ ಕಾಲೇಜುಗಳು ತೆರೆದುಕೊಂಡಿದ್ದವು. ಬಸ್‍ಸಂಚಾರ ಎಂದಿನಂತಿತ್ತು. ಅಂಗಡಿ ಮುಗ್ಗಟ್ಟುಗಳು ಚುರುಕಾಗಿ ವ್ಯಾಪಾರ ವಹೀವಾಟು ನಡೆಸಿದವು. ಗದಗ ನಗರ ಎಂದಿನಂತೆ ಸಹಜ ಸ್ಥಿತಿಯಲ್ಲಿತ್ತು.

loading...