ಗದ್ದೆಯಲ್ಲಿ ತೋಟ ನಿರ್ಮಾಣದ ನಿರ್ವಹಣೆ ಕುರಿತು ತರಬೇತಿ

0
19

ಕನ್ನಡಮ್ಮ ಸುದ್ದಿ-ಶಿರಸಿ: ಕೃಷಿಯಲ್ಲಿ ರೈತರು ಮತ್ತು ವಿಜ್ಞಾನಿಗಳ ನಿರಂತರ ಸಂಪರ್ಕವಿದ್ದರೆ ಮಾತ್ರ ಹೊಸ ಹೊಸ ತಂತ್ರಜ್ಞಾನ ಅಭಿವೃದ್ದಿ, ಆಧುನಿಕ ಕೃಷಿ ಮತ್ತು ಉತ್ತಮ ಇಳುವರಿ ಸಾಧ್ಯ ಎಂದು ಪ್ರಗತಿಪರ ಕೃಷಿಕ ಕೆ.ಎಂ.ಹೆಗಡೆ ಭೈರುಂಬೆ ಹೇಳಿದರು.
ಹುಳಗೋಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ವರ್ಷದ ಅಂಗವಾಗಿ ಸಂಘದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮದಲ್ಲಿ ‘ಗದ್ದೆಯಲ್ಲಿ ತೋಟ ನಿರ್ಮಾಣದ ಸವಾಲುಗಳು ಹಾಗೂ ಪರಿಹಾರ ಮತ್ತು ಅಡಿಕೆ ತೋಟದಲ್ಲಿ ಮಿಶ್ರಬೆಳೆ ಹಾಗೂ ಏಕಬೆಳೆಯಾಗಿ ಕಾಳುಮೆಣಸು’ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೃಷಿ ಕ್ಷೇತ್ರದಲ್ಲಾಗುವ ಬದಲಾವಣೆ ಹಾಗೂ ಮುಂದಿನ ಶತಮಾನದ ಸವಾಲುಗಳ ಕುರಿತು ಈಗಿನಿಂದಲೇ ಅವಲೋಕನ ನಡೆಸುವುದು ಸೂಕ್ತ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಾಸರಗೋಡದ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ವಿಜ್ಞಾನಿ ರವಿ ಭಟ್ಟ ಅವರು ‘ಗದ್ದೆಯಲ್ಲಿ ತೋಟ ಮಾಡಿದಾಗ ಆಗುವ ತೊಂದರೆಗಳು ಹಾಗೂ ಅದರ ನಿರ್ವಹಣೆ’ ಕುರಿತು ತರಬೇತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಎಂ.ಎನ್‌.ವೇಣುಗೋಪಾಲ ‘ಕಾಳುಮೆಣಸು ಬೇಸಾಯ ಹಾಗೂ ಕೊಳೆ ರೋಗದ ನಿರ್ವಹಣೆ’ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಕಾಳುಮೆಣಸು ಕೃಷಿ ಉತ್ತಮವಾಗಿ ಮಾಡಿರುವ ಜಿಲ್ಲೆಯ ಪ್ರಗತಿಪರ ರೈತರಾದ ವಿಶ್ವನಾಥ ಹೆಗಡೆ ಕೊಪ್ಪ, ರವೀಂದ್ರ ಭಟ್ಟ ಕಾನಗೋಡು, ರಮಾಕಾಂತ ಹೆಗಡೆ ಹುಣಸೆಕೊಪ್ಪ, ಗಜಾನನ ಹೆಗಡೆ ಗಲ್ಲದಮನೆ, ಸುಧೀರ ಬಲ್ಸೆ ಚವತ್ತಿ ಇವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಮಾರುತಿ ಇಂಜನಿಯರಿಂಗ್‌ ವಕ್ಸ್‌ರ್ ಚನ್ನಗಿರಿ ಇವರ ‘ಮಿನಿ ರೈಸ್‌ ಮಿಲ್‌’ ಪ್ರಾತ್ಯಕ್ಚಿಕೆ ಏರ್ಪಡಿಸಲಾಗಿತ್ತು. ತರಬೇತಿಯಲ್ಲಿ ಪಾಲ್ಗೊಂಡ 250ಕ್ಕೂ ಹೆಚ್ಚಿನ ರೈತರಿಂದ ಕಾಳುಮೆಣಸನ್ನು ರೋಗರಹಿತವಾಗಿ ನಿರ್ವಹಿಸಬಹುದು ಅಲ್ಲದೇ ಖರ್ಚಿಗಿಂತ ದ್ವಿಗುಣ ಆದಾಯ ಕಾಳುಮೆಣಸು ಬೆಳೆಯಲ್ಲಿ ಸಾಧ್ಯ ಎಂಬ ಸಾಮಾನ್ಯ ಅಭಿಪ್ರಾಯ ವ್ಯಕ್ತವಾಯಿತು.
ಟಿ.ಎಂ.ಎಸ್‌. ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಮಾರುಕಟ್ಟೆಯಲ್ಲಿ ಸಂಘ ಸಂಸ್ಥೆಗಳ ಪಾತ್ರದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದ ಕುರಿತು ಪ್ರಾಸ್ರಾವಿಕವಾಗಿ ಜಿ.ವಿ.ಹೆಗಡೆ ಹುಳಗೋಳ ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ಆರ್‌.ಹೆಗಡೆ ಹುಳಗೋಳ ಸ್ವಾಗತಿಸಿದರು. ಎ.ಎಸ್‌.ಭಟ್ಟ ಹುಳಗೋಳ ಮತ್ತು ಶಶಿಕಾಂತ ಹೆಗಡೆ ನಿರ್ವಹಿಸಿದರು. ಸಂಘದ ಮುಖ್ಯಕಾರ್ಯನಿರ್ವಾಹಕ ಜಿ.ಎಂ.ಹೆಗಡೆ ಮಾತ್ನಳ್ಳಿ ವಂದಿಸಿದರು.

loading...