ಗೇರುಸೊಪ್ಪಾ ಶರಾವತಿ ಆಣೆಕಟ್ಟಿನಿಂದ ನೀರನ್ನು ಬಿಡಲಾಗಿದೆ

0
11
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ಗೇರುಸೊಪ್ಪಾ ಶರಾವತಿ ಆಣೆಕಟ್ಟಿನಿಂದ 42000 ಕ್ಯೂಸೆಕ್ ನೀರನ್ನು ಗುರುವಾರ ನದಿಗೆ ಬಿಡಲಾಗಿದ್ದು ತಾಲೂಕಿನ ಶರಾವತಿ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಲಿಂಗನಮಕ್ಕಿ ಜಲಾಶಯದಿಂದ ಸಂಜೆ ವೇಳೆಗೆ ಹನ್ನೊಂದೂ ಕ್ಲಸ್ಟರ್ ಗೇಟ್‍ಗಳನ್ನು ತೆರೆದು 22 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಕೆಳಗಡೆ ಇರುವ ಶರಾವತಿ ಟೇಲ್‍ರೇಸ್ ಡ್ಯಾಂನಿಂದ ವಿದ್ಯುತ್ ಉತ್ಪಾದನೆಯ 22 ಸಾವಿರ ಹಾಗೂ ಹೆಚ್ಚುವರಿ 20 ಸಾವಿರ ಕ್ಯೂಸೆಕ್ ನೀರನ್ನು ಸಂಜೆ 4.30 ಗಂಟೆಗೆ ನದಿಗೆ ಬಿಡಲಾಗಿದ್ದು ಯಾವ ಸಂದರ್ಭದಲ್ಲೂ ಹೆಚ್ಚಾಗಬಹುದು ಎಂದು ಶರಾವತಿ ಟೆಲ್‍ರೇಸ್ ಯೋಜನೆಯ ಕಾರ್ಯಪಲಕ ಅಭಿಯಂತರೆ ಶ್ರೀಲಕ್ಷ್ಮಿ ಮಾಹಿತಿ ನೀಡಿದ್ದಾರೆ.

ಶಾಸಕರ ಭೇಟಿ: ಶಾಸಕ ಸುನೀಲ ನಾಯ್ಕ ಗೇರುಸೊಪ್ಪಾ ಕೆಪಿಸಿಗೆ ಭೇಟಿ ನೀಡಿ ಕೆಪಿಸಿ ಅಧಿಕಾರಿ ಚೈತನ್ಯ ಪ್ರಭು ಹಾಗೂ ಶ್ರೀಲಕ್ಷ್ಮೀ ಅವರೊಂದಿಗೆ ಚರ್ಚಿಸಿದರು. ನದಿ ತೀರದ ಜನರ ಹಿತದೃಷ್ಠಿಯಿಂದ ನೀರನ್ನು ಏಕಾಏಕಿ ಹೊರಬಿಡದೇ ಹಂತಹಂತವಾಗಿ ಹೊರಬಿಡಬೇಕು. ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿ ಕೃತಕ ಪ್ರವಾಹವನ್ನು ಸೃಷ್ಠಿಸಬೇಡಿ ಎಂದು ಕೆಪಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಂತರ ಶಾಸಕರು ನೆರೆಪಿಡಿತ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ನಾಯ್ಕ, ಮುಖಂಡರಾದ ಬಳಕೂರು ಕೇಶವ ನಾಯ್ಕ, ವಿಘ್ನೇಶ ಹೆಗಡೆ, ಉಲ್ಲಾಸ ಶಾನಭಾಗ, ಜಯಂತಿ ನಾಯ್ಕ, ಹರಿಶ್ಚಂದ್ರ ನಾಯ್ಕ, ಸಿ.ಎಸ್. ನಾಯ್ಕ ಮತ್ತಿತರರು ಶಾಸಕರ ಜೊತೆಗಿದ್ದರು.

ಸ್ಥಳಕ್ಕೆ ತಹಸೀಲ್ದಾರರ ಭೇಟಿ: ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ನೋಡಲ್ ಹಾಗೂ ಇತರ ಅಧಿಕಾರಿಗಳು ತಮ್ಮ ಕೇಂದ್ರ ಬಿಡದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ತಹಸೀಲ್ದಾರ ಮಂಜುಳಾ ಭಜಂತ್ರಿ ನಿರ್ದೇಶನ ನೀಡಿದ್ದಾರೆ. ಎನ್‍ಡಿಆರ್‍ಎಪ್ ತಂಡ ಹಾಗೂ ತಹಸೀಲ್ದಾರ ಮತ್ತು ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

loading...