ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ

0
5
loading...

ಆಲಮಟ್ಟಿ: ತೀವ್ರ ಕುತೂಹಲ ಕೆರಳಿಸಿದ್ದ ಯಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಯಲಗೂರ ಗ್ರಾಮದ ಕಸ್ತೂರಿ ಪ್ರಕಾಶ ಕಾರಿ, ಉಪಾಧ್ಯಕ್ಷರಾಗಿ ಕಾಶೀನಕುಂಟಿ ಗ್ರಾಮದ ಯಲ್ಲಾಲಿಂಗ ಭೀಮಪ್ಪ ಬಿರಾದಾರ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ೧೫ ಜನ ಸದಸ್ಯರಲ್ಲಿ ೧೦ ಜನ ಸದಸ್ಯರು ಮಾತ್ರ ಭಾಗವಹಿಸಿದ್ದರು.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ೧೦ ಜನ ಸದಸ್ಯರನ್ನು ಬೇರೆ ಕಡೆ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
೧೫ ಸದಸ್ಯ ಬಲದ ಯಲಗೂರ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಕಳೆದ ತಿಂಗಳು ಚುನಾವಣೆ ನಡೆದಿತ್ತು.
ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಫಲಿತಾಂಶವನ್ನು ಚುನಾವಣಾಧಿಕಾರಿಗಳು ಆದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ವೈ. ಭಜಂತ್ರಿ ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿ ಎಸ್.ಎಸ್. ಬಂಗಾರಗುಂಡ, ಪಿಡಿಓ ಬಸವರಾಜ ಕಾಳಗಿ ಇದ್ದರು.
ವಿಜಯೋತ್ಸವ:
ನಂತರ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಅಭಿನಂದಿಸಿದ ಕಾಂಗ್ರೆಸ್ ಮುಖಂಡ ಶ್ಯಾಮ ಪಾತರದ ಮಾತನಾಡಿದರು. ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಗ್ರಾಮದ ತುಂಬೆಲ್ಲಾ ಅದ್ಧೂರಿ ಮೆರವಣಿಗೆ ನಡೆಸಿದರು.

loading...