ಚತುಷ್ಫಥ ಹೆದ್ದಾರಿ ನಿರ್ಮಾಣಕ್ಕೆ ಗುಡ್ಡಗಳ ನೆಲಸಮ: ಸಾರ್ವಜನಿಕರ ಆತಂಕ

0
22
loading...

ದೀಪಕ ಶೆಟ್ಟಿ
ಕನ್ನಡಮ್ಮ ಸುದ್ದಿ-ಕಾರವಾರ: ಕೊಡಗು ಹಾಗೂ ಕೇರಳಗಳಲ್ಲಾದ ನೈಸರ್ಗಿಕ ವಿಕೋಪ ಹಾಗೂ ಭೂಕುಸಿತಗಳಿಂದಾದ ಭಾರೀ ಅನಾಹುತ ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಅದರಲ್ಲೂ ಕರಾವಳಿ ಭಾಗದ ತಾಲೂಕುಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಯ ಗುಡ್ಡ, ಬೆಟ್ಟಗಳನ್ನು ಸ್ಫೋಟಿಸಿ ಹೆದ್ದಾರಿ ನಿರ್ಮಿಸಲಾಗುತ್ತಿದ್ದು ಇದು ಮುಂದಿನ ದಿನಗಳಲ್ಲಿ ಭೂಕುಸಿತಕ್ಕೆ ದಾರಿಯಾಗಬಹುದೆಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕಳೆದ ಒಂದು ದಶಕಗಳಲ್ಲಿ ಎರಡು ಬಾರಿ ಇಂಥ ಭೂಕುಸಿತಕ್ಕೆ ಜಿಲ್ಲೆ ಸಾಕ್ಷಿಯಾಗಿತ್ತು. 2009 ಅಕ್ಟೋಬರ್ 2ರಂದು ಕಾರವಾರ ತಾಲೂಕಿನ ಕಡವಾಡದಲ್ಲಿ ಭೂಕುಸಿತವುಂಟಾಗಿ 20 ಜನ ಸಾವನ್ನಪ್ಪಿದ್ದರು. ಕಳೆದ ವರ್ಷ ಕುಮಟಾ ತಾಲೂಕಿನ ಮಣಕಿ ಬಳಿ ಹೆದ್ದಾರಿ ನಿರ್ಮಾಣಕ್ಕಾಗಿ ಸ್ಪೋಟ ಬಳಸಿದ್ದರಿಂದ ಗುಡ್ಡ ಕುಸಿದು ಮೂವರು ಮಕ್ಕಳು ಸಾವಿಗೀಡಾಗಿದ್ದರು. ಭಟ್ಕಳದಿಂದ ಕಾರವಾರದವರೆಗೆ ರಾಷ್ಟ್ರೀಯ ಹೆದ್ದಾರಿ-66ನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆರಿಸಲಾಗುತ್ತಿದೆ. ಇದಕ್ಕಾಗಿ ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಭಾರೀ ಪ್ರಮಾಣದ ಜಿಲೇಟಿನ್ ಬಳಸಿ ಸ್ಪೋಟಿಸಲಾಗುತ್ತಿದೆ. ಈ ಸ್ಫೋಟದಿಂದ ಭಾರೀ ಪ್ರಮಾಣದ ಕಂಪನಕ್ಕೆ ಗುಡ್ಡ ಬೆಟ್ಟಗಳ ಮಣ್ಣುಗಳು ಸಡಿಲಗೊಂಡು ಭೂಕುಸಿತದ ಸಾಧ್ಯತೆ ಹೆಚ್ಚಿದೆ. ಹೆದ್ದಾರಿ ಅಕ್ಕಪಕ್ಕದಲ್ಲಿರುವ ಬೃಹತ್ ಗಾತ್ರದ ಬಂಡೆಗಲ್ಲುಗಳು ಗುತ್ತಿಗೆದಾರರಿಗೆ ಚಿನ್ನದ ಗಣಿಯಂತಾಗಿದೆ. ಅವಶ್ಯಕತೆ ಇರಲಿ ಇರದೇ ಇರಲಿ ಈ ಬಂಡೆಗಲ್ಲುಗಳನ್ನು ಸ್ಫೋಟಕ ಬಳಸಿ ಜೆಲ್ಲಿಯನ್ನಾಗಿಸಿ ಹೆದ್ದಾರಿಗೆ ಬಳಸಿಕೊಳ್ಳುತ್ತಿದ್ದಾರೆ.
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ಉತ್ತರಕನ್ನಡದಲ್ಲಿ ಅಪರೂಪದ ಜೀವ ವೈವಿದ್ಯತೆಗಳು ಇಲ್ಲಿದೆ. ಇಂಥ ಅಪರೂಪದ ಸೂಕ್ಷ್ಮ ವಲಯಗಳಲ್ಲಿ ಸ್ಫೋಟಕಗಳನ್ನು ಬಳಸಿ ಕಲ್ಲು ಬಂಡೆಗಳನ್ನು ಪುಡಿಮಾಡುತ್ತಿರುವುದು ಪರಿಸರದ ಮೇಲೆ ಚೆಲ್ಲಾಟವಾಡಿದಂತೆ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಪರಿಸರದ ಮೇಲಿನ ದಾಳಿಯನ್ನು ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಕಡವಾಡ ಮತ್ತು ಮಣಕಿಯಲ್ಲಾದಂತೆ ಭೂಕುಸಿತಗಳುಂಟಾಗಿ ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗೂ ಪ್ರಾಣ ಹಾನಿಗಳುಂಟಾಗ ಬಹುದು ಎಂಬುದು ಪರಿಸರ ಪ್ರೀಯರ ಆತಂಕವಾಗಿದೆ.

loading...