ಜಲಾವೃತವಾದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

0
17

ಕನ್ನಡಮ್ಮ ಸುದ್ದಿ-ಮುಂಡರಗಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ತುಂಗಭದ್ರಾ ನದಿ ಪ್ರವಾಹ ಹೆಚ್ಚಾಗಿ ಜಲಾವೃತವಾಗಿದ್ದ ವಿಠಲಾಪುರ, ಹಳೆಶಿಂಗಟಾಲೂರ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು.
ಹಳೆಶಿಂಗಟಾಲೂರ ಗ್ರಾಮದ ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಗ್ರಾಮದಲ್ಲಿ 12-15ಕುಟುಂಬದವರು ವಾಸವಾಗಿದ್ದಾರೆ. ಪ್ರವಾಹ ಬಂದಾಗ ಎಲ್ಲ ಅಧಿಕಾರಿಗಳು ಜನಪ್ರತಿನಿಧಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಇದುವರೆಗೂ ನಮ್ಮ ತೊಂದರೆಗಳು ಬಗೆಹರಿಯುತ್ತಿಲ್ಲ ಎಂದು ಹಳೆಶಿಂಗಟಾಲೂರ ಗ್ರಾಮಸ್ಥ ಫಕೀರಶೆಟ್ಟಿ ಶೆಟ್ಟರ್ ದೂರಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪ್ರಕೃತಿ ವಿಕೋಪದಡಿಯಲ್ಲಿ ಹೊಸಶಿಂಗಟಾಲೂರನಲ್ಲಿ ಶೆಡ್ ನಿರ್ಮಿಸಿಕೊಡಲಾಗುವುದು. ಗ್ರಾ.ಪಂ.ವತಿಯಿಂದ ಬಸವ ವಸತಿ ಯೋಜನೆಯ ಅಡಿಯಲ್ಲಿ ಹಳೆಶಿಂಗಟಾಲೂರ ಗ್ರಾಮಸ್ಥರು ಹೊಸಶಿಂಗಟಾಲೂರಿನಲ್ಲಿ ಮನೆಗಳನ್ನು ಕಟ್ಟಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಳೆ ಶಿಂಗಟಾಲೂರನಲ್ಲಿ ಮೊದಲು 25ಕುಟುಂಬದವರು ವಾಸವಿದ್ದರು. ಅದರಲ್ಲಿ 10 ಕುಟುಂಬದವರಿಗೆ ಹೊಸಶಿಂಗಟಾಲೂರನಲ್ಲಿ ಮನೆ ಕಟ್ಟಿಕೊಳ್ಳಲು ಬಸವ ವಸತಿಯಲ್ಲಿ ಅನುದಾನ ನೀಡಲಾಗಿದೆ. ಈಗಾಗಲೆ ಕೆಲವರು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಇನ್ನುಳಿದ ಕಟುಂಬದವರಿಗೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡಲಾಗುವುದು ಎಂದು ಶಿಂಗಟಾಲೂರ ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಮುಂಡವಾಡ ತಿಳಿಸಿದರು. ನಂತರ ವಿಠಲಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಪ್ರತಿ ಬಾರಿ ನೆರೆ ಬಂದಾಗ ವಿಠಲಾಪುರ ಗ್ರಾಮದ ಬಹುತೇಕ ಮನೆಗಳು ಜಲಾವೃತಗೊಳ್ಳುತ್ತವೆ. ಇದರಿಂದಾಗಿ ಗ್ರಾಮದ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು. ವಿಠಲಾಪುರ ಗ್ರಾಮದ ಪುನರ್‍ವಸತಿಗೆ ನಿವೇಶವನ್ನು ಆದಷ್ಟು ಬೇಗ ಖರೀದಿಸಲಾಗುತ್ತದೆ. ಈಗಾಗಲೆ ಭೂಮಿ ಖರೀದಿ ಪ್ರಕ್ರಿಯೆ ನಡೆದಿದೆ. ನಿವೇಶನ ಕಲ್ಪಿಸಿದ ನಂತರ ಪರಿಹಾರ ಕೊಡುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಗ್ರಾಮಸ್ಥರಿಗೆ ತಿಳಿಸಿದರು. ಉಪ ವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ತಾ.ಪಂ.ಇಒ ಸಿ.ಆರ್.ಮುಂಡರಗಿ, ಕಂದಾಯ ನಿರೀಕ್ಷಕ ಎಸ್.ಎಸ್.ಬಿಚ್ಚಾಲಿ, ಎಚ್.ಟಿ.ಸ್ವಾಗಿ, ಲೋಕೇಶ ಶೆಟ್ಟರ್ ಇದ್ದರು.

loading...