ಜಿಲ್ಲಾ ಉಸ್ತುವಾರಿ ಸಚಿವರ ಕೊಠಡಿಗೆ ಬೀಗ: ಕೊಪ್ಪಳದತ್ತ ಮುಖಮಾಡದ ಅರಣ್ಯ ಸಚಿವರು

0
3
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಲ್ಲಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಕಚೇರಿಗೆ ಹಾಕಿದ ಬೀಗ ಇನ್ನೂ ತೆರೆದಿಲ್ಲ. ಚುನಾವಣೆ ಮುಗಿದಿದೆ, ಜಿಲ್ಲೆಗೆ ಉಸ್ತುವಾರಿ ಮಂತ್ರಿಯೂ ನೇಮಕವಾಗಿದ್ದರೂ ಸಹ ಕೊಠಡಿಗೆ ಹಾಕಿದ ಬೀಗ ಇನ್ನೂ ತೆಗೆದಿಲ್ಲ. ಜಿಲ್ಲಾ ಆಡಳಿತ ಭವನದಲ್ಲಿರುವ ಉಸ್ತುವಾರಿ ಮಂತ್ರಿಗಳಿಗೆ, ಸಂಸದರಿಗೆ ಪ್ರತ್ಯೇಕವಾಗಿ ಸುಸಜ್ಜಿತ ಹವಾ ನಿಯಂತ್ರಣ ಕೊಠಡಿಗಳನ್ನು ಮೀಸಲಾಗಿರಿಸಿದೆ. ಅದರಂತೆ ರಾಯಚೂರು-ಕೊಪ್ಪಳ ವಿಧಾನ ಪರಿಷತ್ ಸದಸ್ಯರಿಗೆ ಈ ಹಿಂದೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಆದರೆ, ಈಗಿರುವ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲರು ಕಚೇರಿ ಆರಂಭಿಸುವ ಗೋಜಿಗೆ ಹೋಗದಿರಲಿ ಅವರು ಕೊಪ್ಪಳ ಜಿಲ್ಲೆಗೆ ಬರುವುದೇ ಒಂದು ಅಪರೂಪ. ವಿಧಾನಸಭಾ ಚುನಾವಣೆಗಳು ಮುಗಿದಿವೆ.
ಹೊಸ ಸರ್ಕಾರ ಆಸ್ತಿತ್ವಕ್ಕೆ ಬಂದಿದ್ದು, ಈ ಜಿಲ್ಲೆಗೆ ರಾಣೆಬೆನ್ನೂರು ಶಾಸಕ, ಅರಣ್ಯ ಸಚಿವ ಆರ್. ಶಂಕರ್ ಅವರನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನಾಗಿ ನೇಮಿಸಿ ತಿಂಗಳುಗಳೇ ಕಳೆದಿವೆ. ಆಗಷ್ಟ-15 ರಂದು ಬಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಂಡಾ ಹಾರಿಸಿ ಹೋದ ಮಂತ್ರಿಗಳು ತಿರುಗಿ ಕೊಪ್ಪಳದತ್ತ ಮುಖವೇ ಮಾಡಿಲ್ಲ.ಇಲಾಖೆಯಲ್ಲಿನ ವರ್ಗಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಿಂದ ಕೊಪ್ಪಳಕ್ಕೆ ಬರಲು ಆಗುತ್ತಿಲ್ಲ. ಚುನಾವಣೆ ಬಳಿಕ ಜಿಲ್ಲೆಗೆ ಬರುವೆ ಎಂದು ಅರಣ್ಯ ಮಂತ್ರ ಆರ್.ಶಂಕರ್ ಅವರು ಪ್ರಥಮಬಾರಿಗೆ ಆ-15 ರಂದು ಕೊಪ್ಪಳಕ್ಕೆ ಬಂದವೇಳೆಯಲ್ಲಿ ತಿಳಿಸಿದ್ದರು. ಆದರೆ ಸಚಿವರು ಬಾರದಿದ್ದರೇನಂತೆ ಅವರ ಕಚೇರಿಗೆ ಹಾಕಿರುವ ಬೀಗವನ್ನು ತೆಗೆದು ಸಾರ್ವಜನಿಕರು ಕುಂದು-ಕೊರತೆಗಳನ್ನು ಸಲ್ಲಿಸಲು ಅನುಕೂಲವಾಗಲು ಕಚೇರಿ ಆರಂಭಿಸಬಹುದಾಗಿತ್ತು. ಜಿಲ್ಲೆಗೆ ಮಂತ್ರಿಗಳು ಯಾವಾಗ ಬರುತ್ತಾರೂ, ಅವರ ಕಚೇರಿಗೆ ಹಾಕಿರುವ ಬೀಗ ಯಾವಾಗ ತೆರೆಯುತ್ತಾರೆ ಕಾದುನೋಡಬೇಕು.
ನಡೆಯದ ಕೆಡಿಪಿ ಸಭೆ: ಈ ಹಿಂದೆ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಜಿಲ್ಲೆಯವರೇ ಆದ ಬಸವರಾಜ ರಾಯರೆಡ್ಡಿ ಇದ್ದರೂ ಸಹ ಅವರು ಕಳೆದ ಒಂದು ವರ್ಷದಲ್ಲಿ ಒಂದೆ ಒಂದು ಕೆಡಿಪಿ ಸಭೆ ನಡೆಸಲಿಲ್ಲ, ಈಗ ಅವರ ಹಾದಿಯಲ್ಲಿಯೇ ಈಗಿನ ಉಸ್ತುವಾರಿ ಮಂತ್ರಿಗಳು ನಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಮಳೆಕೊರತೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಒಂದಡೆ ಇನ್ನೊಂದಡೆ ಬಿತ್ತನೆ ಇಲ್ಲದೆ ರೈತ ಸಮುದಾಯ ಸಂಕಷ್ಟಕ್ಕೆ ಒಳಗಾಗಿದ್ದು, ಸತತ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಬರ ಪರಿಹಾರ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಆದರೆ ಉಸ್ತುವಾರಿ ಮಂತ್ರಿಗಳು ಇದುವರೆಗೂ ಅಧಿಕಾರಿಗಳ ಸಭೆಯನ್ನೇ ನಡೆಸಲಿಲ್ಲ, ಹಾಗೂ ಅವರು ತಮ್ಮ ಕಚೇರಿಯನ್ನು ಆರಂಭಿಸದೆ ಇರುವುದು ದುರುಂತವೇ ಸರಿ.

loading...