ಜ್ಯಾತ್ಯಾತೀತ, ರಾಷ್ಟ್ರೀಯತೆಯ ತತ್ವಗಳ ಪಾಲನೆಯಾಗಲಿ

0
5
loading...

ಮುದ್ದೇಬಿಹಾಳ : ಸ್ವಾತಂತ್ರ್ಯ ದೊರೆತ ಬಳಿಕ ನಮ್ಮ ರಾಷ್ಟ್ರದ ಜನತೆಯಲ್ಲಿ ರಾಷ್ಟ್ರೀಯತೆ,ಜ್ಯಾತ್ಯಾತೀತತೆ,ಸತ್ಯ,ಅಹಿಂಸೆ ಹಾಗೂ ಪ್ರಾಮಾಣಿಕತೆ ತತ್ವಗಳ ಪಾಲನೆಯಾಗಬೇಕಿದೆ ಎಂದು ತಹಸೀಲ್ದಾರ್‌ ಎಂ.ಎಸ್‌.ಬಾಗವಾನ ಹೇಳಿದರು. ಪಟ್ಟಣದ ತಹಸೀಲ್ದಾರ್‌ ಕಛೇರಿಯ ಎದುರಿಗೆ ಬುಧವಾರ ಸಾರ್ವಜನಿಕವಾಗಿ ಹಮ್ಮಿಕೊಂಡಿದ್ದ 72ನೇ ಸ್ವಾತಂತ್ರ್ಯೋತ್ಸವ ನಿಮಿತ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ವಿವಿಧತೆಯಲ್ಲಿ ಏಕತೆ ಸಾರಿರುವ ರಾಷ್ಟ್ರ ನಮ್ಮದಾಗಿದೆ.ಹಿರಿಯರು ತಂದು ಕೊಟ್ಟಿರುವ ಸ್ವಾತಂತ್ರ್ಯವನ್ನು ನಾವು ಜತನದಿಂದ ಕಾಪಾಡಿಕೊಳ್ಳುವ ಜವಾಬ್ದಾರಿ ದೇಶದ ನಾಗರಿಕರ ತಲೆ ಮೇಲಿದೆ.ಸರಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿ ಪ್ರಜೆಗಳನ್ನು ಸಶಕ್ತೀಕರಣಕ್ಕೆ ಮುಂದಾಗಿದೆ ಎಂದು ಹೇಳಿದರು.
ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆ ಶೇ.50ರಷ್ಟು ಕಡಿಮೆ ಪ್ರಮಾಣದಲ್ಲಾಗಿದ್ದು ನಾವೆಲ್ಲ ಉತ್ತಮ ಮಳೆಗಾಗಿ ಪ್ರಾರ್ಥಿಸಬೇಕಿದೆ.ತೋಟಗಾರಿಕೆ,ನೀರಾವರಿ,ಕೃಷಿ,ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ಯೋಜನೆಗಳು ಜಾರಿಗೊಳಿಸಿದ್ದರೂ ಅವುಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮಾತನಾಡಿ,ದೇಶದ ಅಖಂಡತೆ, ಸಮಗ್ರತೆಗಾಗಿ ನಾವು ಹೋರಾಟ ನಡೆಸಬೇಕಿದೆ.ಹಲವರ ಬಲಿದಾನದಿಂದ ದೊರೆತಿರುವ ಸ್ವಾತಂತ್ರ್ಯದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.ಕ್ರೀಡೆಯಲ್ಲಿ ಆಸ್ಸಾಂದ ಕುಗ್ರಾಮವೊಂದರ ಯುವತಿ ಹಿಮಾದಾಸ್‌ ವಿಶ್ವವೇ ಅಚ್ಚರಿ ಪಡುವ ಸಾಧನೆ ತೋರಿದ್ದು ಅದರಂತೆ ನಮ್ಮ ಭಾಗದ ವಿದ್ಯಾರ್ಥಿಗಳು ಉನ್ನತ ಸಾಧನೆ ತೋರಬೇಕು ಎಂದರು.
ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಜಿಪಂ ಸದಸ್ಯೆ ಪದ್ಮಾವತಿ ವಾಲೀಕಾರ, ತಾಪಂ ಸದಸ್ಯ ಚಂದ್ರಕಲಾ ಲೊಟಗೇರಿ, ಪುರಸಭೆ ಸದಸ್ಯರಾದ ಮಹಿಬೂಬ ಗೊಳಸಂಗಿ, ಶರಣು ಬೂದಿಹಾಳಮಠ, ನೌಕರರ ಸಂಘದ ಅಧ್ಯಕ್ಷ ಎಸ್‌.ಆರ್‌.ಕಟ್ಟೀಮನಿ, ಗೋವಾ ವಿಮೋಚನಾ ಹೋರಾಟಗಾರ ಬಿ.ಎಚ್‌.ಮಾಗಿ, ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಸಿಪಿಐ ರವಿಕುಮಾರ ಕಪ್ಪತ್ತನವರ, ಬಿಇಓ ಎಸ್‌.ಡಿ.ಗಾಂಜಿ, ತಾಪಂ ಇಓ ಡಾ.ಎಸ್‌.ವಾಯ್‌.ಭಜಂತ್ರಿ, ವಿಶೇಷ ತಹಸೀಲ್ದಾರ್‌ ಡಾ.ಎಚ್‌.ಎಸ್‌.ಸಜ್ಜನ, ಪಿಎಸೈ ಮಲ್ಲಪ್ಪ ಮಡ್ಡಿ ಮತ್ತಿತರರು ಇದ್ದರು.

loading...