ತಾಳಮೇಳ ಇಲ್ಲದ ದೋಸ್ತಿ ಸರ್ಕಾರಕ್ಕೆ 100 ದಿನದ ಸಂಭ್ರಮ

0
2
loading...

ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ 100 ದಿನಗಳತ್ತ ಸಾಗಿದೆ.
ಸರ್ಕಾರದ ಸಮರ್ಪಕ ಕಾರ್ಯನಿರ್ವಹಣೆಗೆ ರಚನೆಯಾಗಿರುವ ಸಮನ್ವಯ ಸಮಿತಿಯಲ್ಲೇ ಸರಿಯಾದ ತಾಳಮೇಳ ಇಲ್ಲದಂತಾಗಿದೆ. ಕನಿಷ್ಠ ಎರಡು ವಾರಕ್ಕೊಮ್ಮೆ ನಡೆಯಬೇಕಿದ್ದ ಸಭೆ 100 ದಿನದಲ್ಲಿ ಎರಡು ಬಾರಿ ಮಾತ್ರ ನಡೆದಿದೆ.
ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜೂ.13 ಮತ್ತು ಜು.1ರಂದು 2 ಸಾರಿ ಸಮನ್ವಯ ಸಮಿತಿ ಸಭೆ ನಡೆದಿದೆ. ಜೂ.13ರಂದು ಇನ್ನೂ ಬಗೆಹರಿಯದ ಖಾತೆ ಹಂಚಿಕೆ ಗೊಂದಲದ ನಡುವೆಯೇ ಸರ್ಕಾರದ ಮುಂದಿನ ಆಡಳಿತ ಕಾರ್ಯವೈಖರಿ ಹಾಗೂ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದರು.
ಜೊತೆಗೆ ಎರಡೂ ಪಕ್ಷಗಳ ನಡುವೆ ನಿಗಮ/ಮಂಡಳಿಯ ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳುವ ಸಲುವಾಗಿ ಸಭೆ ನಡೆದಿತ್ತು. ನಂತರ ಜು.5ಕ್ಕೆ ಸರ್ಕಾರದ ಬಜೆಟ್ ಇದ್ದ ಕಾರಣ ಸಮನ್ವಯತೆ ಸಭೆ ನಡೆದಿತ್ತು.
ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಈ ಎರಡು ಸಭೆ ಅತ್ಯಂತ ಕಡಿಮೆ ಅಂತರದಲ್ಲಿಯೇ ನಡೆದಿದ್ದವು.ಅದಾದ ನಂತರ ಈವರೆಗೂ ಇನ್ನೂ ಒಂದು ಸಭೆಯೂ ನಡೆದಿಲ್ಲ.ಆ.28ಕ್ಕೆ ಸಭೆ ನಿಗದಿಪಡಿಸಲಾಗಿತ್ತಾದರೂ ಸಿಎಂ ಕುಮಾರಸ್ವಾಮಿ ಪ್ರವಾಸದಲ್ಲಿ ರುವ ಕಾರಣ ಮುಂದೂಡಲ್ಪಟ್ಟಿತ್ತು. ಈಗ ಸೆ.2ರಿಂದ ಸಿದ್ದರಾಮಯ್ಯ ವಿದೇಶ ಪ್ರವಾಸ ತೆರಳುವ ಕಾರಣ ಆ.31ಕ್ಕೆ ಸಮನ್ವಯ ಸಮಿತಿ ಸಭೆ ಸೇರಲು ತೀರ್ಮಾನಿಸಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಸಮಿತಿಯ ಅಧ್ಯಕ್ಷರಾಗಿದ್ದು,ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ,ಉಪಮುಖ್ಯಮಂತ್ರಿ ಜಿ. ಪರ ಮೇಶ್ವರ್,ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್,ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಸಮನ್ವಯ ಸಮಿತಿಯಲ್ಲಿದ್ದಾರೆ.ಈ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಸೇರ್ಪಡೆಗೆ ಒತ್ತಡ ಕೇಳಿಬರುತ್ತಿದೆ.
ದಿನೇಶ್ ಸೇರ್ಪಡೆಗೆ ಸಿದ್ದರಾಮಯ್ಯ ಒಲವು ತೋರಿಸುತ್ತಿದ್ದು,ಹೆಚ್.ವಿಶ್ವನಾಥ್ ಸೇರ್ಪಡೆಗೆ ಅಪಸ್ವರ ಎತ್ತಿದ್ದಾರೆ. ಗುಂಡೂ ರಾವ್ ಸೇರ್ಪಡೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‍ಗೂ ಇಷ್ಟವಿಲ್ಲ.
ಈ ನಡುವೆ ಕೊಡಗು ಅತಿವೃಷ್ಟಿ,ಅನಾಹುತ ಎದುರಾಗಿದ್ದು ಸರ್ಕಾರದ ಗಮನ ಅತ್ತ ಹರಿದಿದೆ.ಸಿದ್ದರಾಮಯ್ಯ ಜಿಲ್ಲಾ ಪ್ರವಾಸ ದಲ್ಲಿ ನಿರತರಾಗಿದ್ದಾರೆ.ಇದರಿಂದ ಸಮನ್ವಯ ಸಮಿತಿ ಸಭೆ ಸರಿಯಾಗಿ ನಡೆಯುತ್ತಿಲ್ಲ.ಸಭೆ ಸೇರಿದರೆ ನಿಗಮ ಮಂಡಳಿ ನೇಮಕ, ಸಚಿವ ಸಂಪುಟ ವಿಸ್ತರಣೆ,ನಾಯಕರ ಅಸಮಾಧಾನ ಇತ್ಯಾದಿ ವಿಚಾರಗಳು ಚರ್ಚೆಗೆ ಬರಲಿವೆ. ಸಮಿತಿಯನ್ನು ದೊಡ್ಡದಾಗಿಸುವ ಮಾತೂ ಮೂಡಬಹುದು.
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಕೂಡಿ ಬರದ ಸಮನ್ವಯತೆ ಸಭೆ ನಡೆಯದಂತೆ ಮಾಡಿದೆ.ಈ ಬೆಳವಣಿಗೆಗಳ ನಡುವೆಯೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು,ಸಮನ್ವಯ ಸಮಿತಿ ಅಂದರೆ ಏನು?,ಅದರ ಜವಾಬ್ದಾರಿ ಏನು? ಎಂಬು ದನ್ನು ಅದರ ಅಧ್ಯಕ್ಷರೇ ಹೇಳಬೇಕು.ಜೆಡಿಎಸ್ ಬೆಂಬಲಿಸಬೇಕೆಂದು ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಂಡಿದೆ. ಮುಖ್ಯ ಮಂತ್ರಿ ಆಯ್ಕೆ ವಿಚಾರ ಸಮನ್ವಯ ಸಮಿತಿಗೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದ್ದಾರೆ.
ಒಟ್ಟಾರೆ ಹತ್ತು ಹಲವು ಬೆಳವಣಿಗೆಗಳ ನಡುವೆ ಸರ್ಕಾರ ತೆವಳುತ್ತಾ ಸಾಗಿದೆ. ಸಮನ್ವಯ ಸಮಿತಿಗೇ ಸಮನ್ವಯದ ಕೊರತೆ ಇದ್ದು, ಇನ್ನು ಸರ್ಕಾರ ನಡೆಸಲು ಎಲ್ಲಿಂದ ಮಾರ್ಗದರ್ಶನ, ಸಲಹೆ, ಸೂಚನೆ ನೀಡಲಿದೆ ಎನ್ನುವ ಪ್ರತಿಪಕ್ಷಗಳ ಮಾತಿಗೆ ಆಡಳಿತ ಪಕ್ಷದ ನಾಯಕರು ಉತ್ತರ ಕೂಡ ನೀಡಲಾಗದ ಸ್ಥಿತಿಯಲ್ಲಿದ್ದಾರೆ.

loading...