ತುಂಗಭದ್ರಾ ನದಿಯಿಂದ ನೀರು ಪೂರೈಸಲು ಆಗ್ರಹಿಸಿ ಪ್ರತಿಭಟನೆ

0
19

ಕನ್ನಡಮ್ಮ ಸುದ್ದಿ-ಮುಂಡರಗಿ: ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸಬೇಕೆಂದು ಒತ್ತಾಯಿಸಿ ತಾಲೂಕಿನ ಬರದೂರ ಗ್ರಾಮಸ್ಥರು ಹಾಗೂ ಮಹಿಳೆಯರು ಗ್ರಾಮದ ಮುಂಡರಗಿ-ಗದಗ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥೆ ಮಾಬುಬೀ ಮಾಳೆಕೊಪ್ಪ ಮಾತನಾಡಿ, ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಕುಟುಂಬದವರೆಲ್ಲ ಜಳಕ ಮಾಡಿಲ್ಲ. ದನ ಕರುಗಳಿಗೆ ಊರ ಹೊರವಲಯದ ಬೋರ್‍ವೆಲ್‍ಗಳಿಂದ ನೀರು ತಂದು ಕುಡಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮದ ಬಸಮ್ಮ ಚಂಡೂರ ಮಾತನಾಡಿ, ಇಡೀ ಗ್ರಾಮಕ್ಕೆ ಒಂದೇ ಬೊರ್‍ವೆಲ್‍ನಿಂದ ಸವಳು ಮಿಶ್ರಿತ ನೀರನ್ನು ಪೂರೈಸುತ್ತಾರೆ. ಆ ನೀರು ಕುಡಿಯುವುದಕ್ಕೆ ಬರುವುದಿಲ್ಲ. ಶುದ್ಧ ನೀರಿನ ಘಟಕವಿದ್ದರೂ ಇಲ್ಲದಾಗಿದೆ. ದಿನಕ್ಕೆ ಮೂರು ತಾಸು ವಿದ್ಯುತ್ ಪೂರೈಕೆಯಾಗುತ್ತದೆ. ಅದರಲ್ಲೇ ಹತ್ತಾರು ಬಾರಿ ಕರೆಂಟ್ ತಗೆಯುತ್ತಾರೆ. ಇದರಿಂದ ನಮಗೆ ನೀರು ಇಡಿದುಕೊಳ್ಳುವುದಕ್ಕೂ ಸಮಸ್ಯೆಯಾಗಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಜಿ.ಪಂ.ಸದಸ್ಯ ಈರಣ್ಣ ನಾಡಗೌಡ್ರ, ತಾ.ಪಂ.ಇಒ ಸಿ.ಆರ್.ಮುಂಡರಗಿ, ಹೆಸ್ಕಾಂ ಎಇಇ ಎಂ.ಬಿ.ಗೌರೋಜಿ, ಸಿಪಿಐ ಮಂಜುನಾಥ ನಡುವಿಮನಿ, ಗ್ರಾಮೀಣ ಕುಡಿಯುವ ನೀರು ಸರಬುರಾಜುಮತ್ತು ನೈರ್ಮಲ್ಯ ಇಲಾಖೆ ಎಇ ಪ್ರಕಾಶ ತೆಲಿ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು.ಅ.8ರಂದು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ್ದಾಗ ಅ.10ರ ನಂತರ ನೀರು ಪೂರೈಸುತ್ತೇವೆ ಎಂದು ಭರವಸೆ ನೀಡಿದ್ದರೂ ಇದುವರೆಗೂ ಸಹ ನಮಗೆ ನದಿ ನೀರು ಪೂರೈಸದೇ ನೀವೇಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ವಂಚಿಸುತ್ತಿದ್ದೀರಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸದಸ್ಯ ನಾಡಗೌಡ್ರ, 1048ಕೋಟಿ ರೂ.ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಅತೀ ದೊಡ್ಡ ಯೋಜನೆಯಾಗಿದೆ. ಅದನ್ನು ಪ್ರಾರಂಭಿಸುದಕ್ಕೆ ಸಮಯ ಬೇಕಾಗುತ್ತದೆ. ವಿದ್ಯುತ್ ಪೂರೈಕೆ ಸಮಸ್ಯೆಯಿಂದ ಪ್ರಾರಂಭಿಸಿಲ್ಲ. ಇನ್ನು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯಲಿದೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ನಿಮ್ಮ ಸಮಸ್ಯೆ ಬಗೆಹರಿಯುವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಆಗ ತಾ.ಪಂ.ಇಒ ಮುಂಡರಗಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವ್ಯವಸ್ಥಾಪಕರೊಂದಿಗೆ ದೂರವಾಣಿಯಲ್ಲಿ ಮಾಡಿದ ಸಮಸ್ಯೆ ಕುರಿತು ಮಾಹಿತಿ ನೀಡಿದರು. ವಿದ್ಯುತ್ ಸಂಪರ್ಕ ಕಾರ್ಯ ಮುಗಿಯದ ಹಿನ್ನೆಲೆಯಲ್ಲಿ ನೀರು ಪೂರೈಸುತ್ತಿಲ್ಲ. ಡೀಸೆಲ್ ಮೂಲಕವಾದರು ಪಂಪ್‍ಹೌಸ್‍ನ ಮೋಟರ್‍ಗಳನ್ನು ಪ್ರಾರಂಭಿಸಿ ಮಧ್ಯಾಹ್ನ 2ಗಂಟೆಯೊಳಗೆ ಬರದೂರ ಗ್ರಾಮಕ್ಕೆ ನೀರು ಪೂರೈಸುತ್ತೇವೆ ಎಂದು ಹೇಳಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದರು.ನಿವೇದಿತಾ ನಾಡಗೌಡ್ರ, ಈರಮ್ಮ ಸಜ್ಜನರ, ಈರಮ್ಮ ಸಜ್ಜನರ, ನಿರ್ಮಲ ಹಡಪದ, ಎಚ್.ಬಿ.ಕುರಿ, ಶಾರವ್ವ ಹಿರೇಮಠ, ನೀಲವ್ವ ಹೆಬಸೂರ, ರೇಣುಕಾ ಪಾಟೀಲ, ಪ್ರೇಮ ನಿಟಾಲಿ, ಮಾಳವ್ವ ಕುರಿ, ರಮಜಾನಬೀ ಮಾಳೆಕೊಪ್ಪ, ಅನಸವ್ವ ಹಳ್ಳಿಕೇರಿ, ಗಿರೀಜಾ ಗೌರಿಪೂರ, ಸಾವಿತ್ರವ್ವ ಸಜ್ಜನರ, ಕಾಶಿಂಬೀ ಮಾಳೆಕೊಪ್ಪ, ಶಿವಪ್ಪ ಸಜ್ಜನರ, ಮಲ್ಲಮ್ಮ ಗೋಡಿ, ದೇವಕ್ಕ ಲಕ್ಮಾಪೂರ, ಈಶ್ವರಪ್ಪ ಶಿರೂರ, ಮಲ್ಲಪ್ಪ ಸುಲ್ತಾನಪೂರ ಇದ್ದರು.

loading...