ತೋಟಗಾರಿಕೆ, ಕೃಷಿ ಬೆಳೆಗಳು ನಾಶ: ಪರಿಹಾರಕ್ಕೆ ಆಗ್ರಹ

0
4
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ತಾಲ್ಲೂಕಿನ ತೋಟಗಾರಿಕಾ ಮತ್ತು ಕೃಷಿ ಬೆಳೆಗಳು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಂಪೂರ್ಣ ನೆಲಕಚ್ಚಿ ಹಾನಿಗೊಳಗಾಗಿದ್ದು, ಕೂಡಲೇ ಕಂದಾಯ ಇಲಾಖೆ ಪರಶೀಲನೆ ನಡೆಸಿ ಬೆಳೆ ಹಾನಿಗೆ ಪರಿಹಾರ ಒದಗಿಸಿಕೊಡಬೇಕೂ ಎಂದು ಬಿಜೆಪಿ ರಾಜ್ಯ ರೈತಮೋರ್ಚಾ ಕಾರ್ಯಕಾರಿಣಿ ಸದಸ್ಯ ಉಮೇಶ್ ಭಾಗ್ವತ್ ಆಗ್ರಹಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕೃಷಿ ಮತ್ತು ತೊಟಗಾರಿಕಾ ಇಲಾಖೆಯಿಂದ ರೈತರಿಗೆ ಸುಮಾರು 50 ಲಕ್ಷ ರೂಪಾಯಿ ಸಹಾಯ ಧನ ಬಾಕಿಯಿದ್ದು, ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಬಿಡುಗಡೆ ಗೊಳಿಸುವತ್ತ ಗಮನ ಹರಿಸಬೇಕು. ಕಾಂಗ್ರೆಸ್ ಸರ್ಕಾರ ಪ್ರತಿ ರೈತರ 50 ಸಾವಿರ ರೂ. ಬೆಳೆ ಸಾಲಮನ್ನಾ ಮಾಡಿದ್ದು, ಅದರ ಬಾಬ್ತು 100 ಕೋಟಿ ಬರಬೇಕಾಗಿದೆ. ಇದರಿಂದ ಸಹಕಾರಿ ಸಂಘಗಳು ಸಂಕಷ್ಟಕ್ಕೀಡಾಗಿವೆ. ತಮ್ಮ ಸ್ವಂತ ಬಂಡವಾಳದಿಂದ ಕೆಲ ಸಹಕಾರಿ ಸಂಘಗಳು ರೈತರಿಗೆ ಬೆಳೆಸಾಲದ ಹಣವನ್ನು ನೀಡಿವೆ. ಈವರೆಗೂ ಜಮಾ ಆಗದಿರುವುದರಿಂದ ರೈತರಿಗೆ ಮರು ಸಾಲ ನೀಡಲು ತೊಂದರೆಯಾಗುತ್ತಿದೆ. ಇಗೀನ ಸಮ್ಮಿಶ್ರ ಸರ್ಕಾರ ಪ್ರತಿ ರೈತರ 1 ಲಕ್ಷ ರೂ. ಬೆಳೆಸಾಲ ಮನ್ನಾ ಮಾಡಿದ್ದು, ಈ ಬಾಬ್ತು ಸಹ ಬೇಗ ಸಹಕಾರಿ ಸಂಘಗಳಿಗೆ ಜಮಾವಣೆ ಮಾಡುವತ್ತ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಡಿಕೆಗೆ ವಿಪರೀತ ಕೊಳೆ ರೋಗ ತಗುಲಿದ್ದು ಜೌಷಧಿ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಭತ್ತ ಬೆಳೆ ನೆಲಕಚ್ಚಿದ್ದು, ಕಾಳುಮೆಣಸು ಸಹ ರೋಗಕ್ಕೆ ತುತ್ತಾಗಿದೆ. ಇದರಿಂದ ತೋಟಗಾರಿಕಾ ಹಾಗೂ ಕೃಷಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಆ ರೈತರಿಗೆ ತಕ್ಷಣ ಪರಿಹಾರ ವಿತರಿಸಬೇಕು. ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದಲ್ಲಿ ರಸ್ತೆ, ಸೇತುವೆ, ಸಕಾರಿ ಕಟ್ಟಡಗಳು ಹಾಳಾಗಿದ್ದು, ರಸ್ತೆಗಳು ದುರವಸ್ಥೆಯಾದ ಪರಿಣಾಮ ಬಸ್ ಸಂಚಾರವೂ ಸಹ ಸ್ಥಗಿತಗೊಂಡಿದೆ. ತಾಲೂಕಿನ ಈರಾಪುರದಲ್ಲಿ ರಸ್ತೆ ಅವ್ಯವಸ್ಥೆಗೊಂಡಿರುವ ಕಾರಣಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದಾರೆ. ಜನವಸತಿ ಪ್ರದೇಶವಾದ್ದರಿಂದ 3-4 ಕಿ,ಮೀ ನಡೆದುಕೊಂಡು ಪಟ್ಟಣ ಪ್ರದೇಶಕ್ಕೆ ಬರುತ್ತಿದ್ದಾರೆ. ಮಳೆಗಾಲ ಪ್ರಾರಂಭವಾದ ಮೇಲೆ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸಮರ್ಪಕವಾಗಿಲ್ಲ. ಇವೆಲ್ಲವುಗಳ ಬಗ್ಗೆ ಸರ್ಕಾರ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮಾಜಿ ಶಾಸಕ ವಿ.ಎಸ್.ಪಾಟೀಲ್ ಮಾತನಾಡಿ, ಅತೀವೃಷ್ಟಿಯಿಂದ ಅಡಿಕೆ ಭತ್ತ ಮತ್ತು ಜೋಳದ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಬೆಳೆವಿಮೆಯ ಬಗ್ಗೆ ರೈತರಿಗೆ ಪಂಚಾಯತ ಮಟ್ಟದಲ್ಲಿ ಮಾಹಿತಿ ನೀಡಲು ಸರ್ಕಾರ ಮುಂದಾಗಬೇಕು. ಇದರಿಂದ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂದು ರೈತರಿಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಜವಳು ಹೆಚ್ಚಾಗಿ ಗೋವಿನಜೋಳ ಹಾನಿಯಾಗಿದ್ದು, ರೈತರು ಎಳೆ ಕುಂಡಿಗೆಯನ್ನು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿ ಎಕೆರೆಗೆ 30 ರಿಂದ 40 ಸಾವಿರ ಪರಿಹಾರ ಧನ ವಿತರಿಸಬೇಕು. ಹಾನಿಯಾದ ಪ್ರದೇಶವನ್ನು ಪರಿಶೀಲಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಎಲ್ಲವನ್ನು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಾದ ಕ್ರಮವಲ್ಲ. ರೈತರ ಮೇಲೆ ಅಸಡ್ಡೆ ಭಾವನೆ ತೋರಿಸದೇ, ಪರಿಹಾರ ವಿತರಿಸುವ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲೆಮನೆ, ಪ್ರಮುಖರಾದ ರಾಘವೇಂದ್ರ ಭಟ್ಟ ಹಾಸಣಗಿ, ಗಣಪತಿ ಬೊಳ್ಗುಡ್ಡೆ, ಶ್ರೀನಿವಾಸ ಗಾಂವ್ಕರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

loading...