ದೇವನಾಡಿನಲ್ಲಿ ಜಲಪ್ರಳಯ, ಜನ ಜೀವನ ತತ್ತರ

0
7
loading...

ತಿರುವನಂತಪುರಂ: ವರುಣನ ಆರ್ಭಟಕ್ಕೆ ತತ್ತರಿಸಿರುವ ಕೇರಳದಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. 5,400 ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಕೇರಳದಲ್ಲಿ 50 ವರ್ಷಗಳ ಇತಿಹಾಸದಲ್ಲೇ ಇದು ದಾಖಲೆ ಪ್ರಮಾಣದ ಮಳೆಯಾಗಿದ್ದು, ಇಡುಕ್ಕಿ ಅಣೆಕಟ್ಟು ನಿರ್ಮಾಣವಾದ 26 ವರ್ಷಗಳ ನಂತರ ಡ್ಯಾಂನ ಎಲ್ಲ ಐದು ಗೇಟ್ ಗಳನ್ನು ತೆರೆಯಲಾಗಿದೆ. ಇಡುಕ್ಕಿ, ಚಿರತೋಣಿ, ಕಾಕ್ಕಿ, ಮುಲ್ಲಪೆರಿಯಾರ್, ಇಡಮಲಯಾರ್ ಸೇರಿದಂತೆ 24 ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪರಿಣಾಮ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಈ ನಡುವೆ ಮುಖ್ಯಮಂತ್ರಿ ಪಿನಾರಯಿ ವಿಜಯನ್ ಅವರು ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವಿನ ಅಭಯ ನೀಡಿದೆ. ಅಗತ್ಯ ಸಹಾಯ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಭರವಸೆ ನೀಡಿದ್ದಾರೆ. ನಾಳೆ ರಾಜನಾಥ ಸಿಂಗ್ ಅವರು ಕೇರಳಕ್ಕೆ ಆಗಮಿಸಿ, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

loading...