ದೇವರಹಿಪ್ಪರಗಿ ತಾಲ್ಲೂಕಿನ ಕಾಲುವೆಗಳಿಂದ ಕೆರೆ ತುಂಬಿಸಲು ಆಗ್ರಹ

0
0
loading...

ಆಲಮಟ್ಟಿ: ದೇವರಹಿಪ್ಪರಗಿ ಭಾಗದಲ್ಲಿ ಬರುವ ವಿವಿಧ ಕೆರೆಗಳನ್ನು, ಸದ್ಯ ಅಲ್ಲಿ ನಿರ್ಮಿಸಲಾಗುತ್ತಿರುವ ಕಾಲುವೆಗಳಿಂದ ಭರ್ತಿ ಮಾಡಬೇಕೆಂದು ಆಗ್ರಹಿಸಿ ದೇವರಹಿಪ್ಪರಗಿ ತಾಲ್ಲೂಕು ನೀರಾವರಿ ರೈತ ಹೋರಾಟ ಸಮಿತಿ ವತಿಯಿಂದ ಕೆಬಿಜೆಎನ್‌ಎಲ್‌ ಅಧಿಕಾರಿಗಳಿಗೆ ಶುಕ್ರವಾರ ಮನವಿ ಅರ್ಪಿಸಲಾಯಿತು.
ಚಿಮ್ಮಲಗಿ ಏತ ನೀರಾವರಿ ಹಾಗೂ ಮುಳವಾಡ ಏತ ನೀರಾವರಿಯ ಮುಖ್ಯ ಕಾಲುವೆಯ ಮೂಲಕ ದೇವರಹಿಪ್ಪರಗಿ ಪಟ್ಟಣ ಹಾಗೂ ತಾಲ್ಲೂಕಿನ ದೇವೂರ, ಮಣೂರ, ಜಾಲವಾದ, ಇಬ್ರಾಹಿಂಪುರ, ಬೊಮ್ಮನಜೋಗಿ, ಕೊಕಟನೂರ, ಕನ್ನೊಳ್ಳಿ, ಪಡಗಾನೂರ, ಇಂಗಳಗಿ, ಹರನಾಳ, ನಿವಾಳಖೇಡ, ಮುಳಸಾವಳಗಿ, ಕಡ್ಲೇವಾಡ, ಚಿಕ್ಕರೂಗಿ ಸೇರಿದಂತೆ ಸುಮಾರು 50 ಕ್ಕೂ ಅಧಿಕ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಬೇಕಿದೆ. ಈ ಯೋಜನೆ ರೂಪಗೊಂಡರೂ, ಕಳೆದ ನಾಲ್ಕೈದು ತಿಂಗಳಿಂದ ಕಾಮಗಾರಿ ಕಾರ್ಯಗತಗೊಳ್ಳದೇ ನೆನೆಗುದಿಗೆ ಬಿದ್ದಿದೆ ಎಂದು ಆ ಭಾಗದ ರೈತರು ಹೇಳಿದರು.
ಮನವಿ ಸ್ವೀಕರಿಸಿದ ಕೆಬಿಜೆಎನ್‌ಎಲ್‌ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್‌ ಎಸ್‌.ಎಚ್‌. ಮಂಜಪ್ಪ ಮಾತನಾಡಿ,
ಚಿಮ್ಮಲಗಿ ಏತ ನೀರಾವರಿ ಯೋಜನೆಯ 137 ಕಿ.ಮೀವರೆಗೂ ಪ್ರಾಯೋಗಿಕ ನೀರು ಹರಿದಿದೆ. ಆದರೆ ಆ ಕಾಲುವೆಯಿಂದ ಕೆರೆ ತುಂಬಿಸಲು ಭೂಸ್ವಾಧೀನಕ್ಕೆ ಅಲ್ಲಿಯ ರೈತರು ಅಡ್ಡಿ ಪಡಿಸುತ್ತಿದ್ದಾರೆ, ಇದರಿಂದ ತೊಂದರೆಯಾಗಿದೆ, ರೈತರು ಸಹಕಾರ ನೀಡಿದರೆ ಎರಡೇ ತಿಂಗಳಲ್ಲಿ ಆ ಎಲ್ಲಾ ಕೆರೆಗಳಿಗೂ ಸಮೀಪದ ಕಾಲುವೆಯಿಂದ ವಿತರಣಾ ಕಾಲುವೆ ನಿರ್ಮಿಸಿ ಕೆರೆಗೆ ನೀರು ಹರಿಸಲಾಗುವುದು ಎಂದರು. ಮುಳವಾಡ ಏತ ನೀರಾವರಿ ಯೋಜನೆಯಲ್ಲಿ ವಿಜಯಪುರ, ಗದಗ ಮಾರ್ಗದ ರೈಲ್ವೆ ಹಳಿ ದಾಟಿಸುವ ಕಾಮಗಾರಿ ನಡೆದಿದೆ, ಅದೂ ಪೂರ್ಣಗೊಂಡ ನಂತರ ಅಲ್ಲಿಂದಲೂ ನೀರು ಹರಿದು, ಅದು ಅನುಷ್ಠಾನಗೊಳ್ಳಲಿದೆ ಎಂದರು.
ಎಸ್‌.ಎ. ಮಸಬಿನಾಳ, ಸಿದ್ದಪ್ಪ, ಶರಣಗೌಡ ಕೊಲ್ಹಾರ, ಬಿ.ಬಿ. ಪಾಟೀಲ, ಫಯಾಜ್‌ ಯಲಗಾರ, ಸಂತೋಷ ಬಿರಾದಾರ, ಮಂಜುನಾಥ ಕೊಕಟನೂರ, ಶ್ರೀಶೈಲ ಇಂಡಿ, ಬಸವರಾಜ ಮಂಗಳೂರ, ಬಾಬುಸಾಬ್‌ ಬೇವೂರ, ಸಿದ್ದು ಪಡಗಾನೂರ ಸೇರಿದಂತೆ ಇತರರು ಇದ್ದರು.

loading...