ನಗರಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾದ ರಸ್ತೆ ಅಭಿವೃದ್ಧಿ

0
11
loading...

ಕನ್ನಡಮ್ಮ ಸುದ್ದಿ-ಕಾರವಾರ: ನಗರದ ಮುಲ್ಲಾಸ್ಟಾಪ್‌ ಬಳಿಯ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ತೀವ್ರ ಚರ್ಚೆ ವಾಗ್ವಾದಕ್ಕೆ ಕಾರಣವಾಯಿತು. ಕಳೆದ ನಗರಸಭೆ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಈ ವಿಷಯ ಚರ್ಚೆಯಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ರಸ್ತೆಯ ಪಕ್ಕದಲ್ಲಿ ಕಿತ್ತೂರ ಎನ್ನುವವರಿಗೆ ಸೇರಿದ ಜಮೀನಿದ್ದು ಈ ಕಾರಣದಿಂದಾಗಿ ರಸ್ತೆ ಅಭಿವೃದ್ಧಿಪಡಿಸಬೇಕು ಎನ್ನುವ ಬೇಡಿಕೆ ಪ್ರಸ್ತಾಪಿಸಲಾಗಿತ್ತು.
ಕಳೆದ ಸಭೆಯಲ್ಲೇ ರಸ್ತೆಯನ್ನು ಅಭಿವೃದ್ಧಿ ಪಡಿಸುವುದು ಬೇಡ ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅಧಿಕಾರಿಗಳು ನಿರ್ಣಯವನ್ನು ತಿರುಚಿ ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಠರಾವಿನಲ್ಲಿ ಬರೆದಿದ್ದಾರೆ ಎಂದು ಅನಿಲ್‌ ನಾಯ್ಕ ಆರೋಪಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಠರಾವನ್ನು ರುದ್ದು ಪಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಎಂ. ಆರ್‌. ನಾಯ್ಕ ಠರಾವು ರದ್ದು ಪಡಿಸಲು ಸಾಧ್ಯವಿಲ್ಲ ಎಂದು ಸಭೆಯ ಗನಮಕ್ಕೆ ತಂದಾಗ, ಅನಿಲ್‌ ನಾಯ್ಕ ಹಾಗೂ ರವೀಂದ್ರ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲವ ವೇಳೆ ಸಭೆಯಲ್ಲಿ ಗಲಾಟೆ ನಡೆಯುವ ಪ್ರಸಂಗ ನಡೆಯಿತು. ಕಿತ್ತೂರ ಎನ್ನುವವರಿಗೆ ಸೇರಿದ ಜಾಗ ರಸ್ತೆ ಪಕ್ಕದಲ್ಲಿದ್ದರಿಂದ ಅವರು ಬಹುಮಹಡಿ ಕಟ್ಟಡ ನಿರ್ಮಿಸುವ ಉದ್ದೇಶವನ್ನಿಟ್ಟುಕೊಂಡು ಕೆಲವರ ಮೂಲಕ ನಗರಸಭೆಯ ಹಣದಲ್ಲಿ ರಸ್ತೆ ಅಭಿವೃದ್ಧಿ ಪಡಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ. ರಸ್ತೆ ಅಭಿವೃದ್ಧಿಯಾದರೆ ಕಟ್ಟಡ ನಿರ್ಮಾಣ ಮಾಡುವವರಿಗೆ ಅನುಕೂಲವಾಗಲಿದೆಯೇ ಹೊರತು, ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜಿಗೆ ಸಾಗಲು ಗೋವರ್ಧನ ಹೋಟೇಲ್‌ ಪಕ್ಕದಿಂದ ದಾರಿ ಇದೆ. ಒಬ್ಬರ ಅನುಕೂಲಕ್ಕಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ರಸ್ತೆ ನಿರ್ಮಿಸುವುದು ಬೇಡ ಎಂದು ರವೀಂದ್ರ ಬಾನಾವಳಿ ಹಾಗೂ ಅನಿಲ್‌ ನಾಯ್ಕ ಆಗ್ರಹಿಸಿದರು. ನಗರದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮೀನು ಮಾರುಕಟ್ಟೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸದಸ್ಯರಾದ ಸಂತೋಷ ನಾಯ್ಕ ಹಾಗೂ ಸಂದೀಪ ತಳೇಕರ ವಿಷಯ ಪ್ರಸ್ತಾಪಿಸಿ, ನಗರದಲ್ಲಿ ನಿರ್ಮಾಣವಾಗುವ ಎಲ್ಲ ಕಟ್ಟಡಗಳಿಗೂ ವಾಹನ ನಿಲುಗಡೆಗೆ ವ್ಯವಸ್ಥೆ ಇರಬೇಕು ಎಂದು ನಗರಸಭೆಯಲ್ಲಿ ಠರಾವು ಮಾಡಿದ ನಂತರವೇ ಮೀನು ಮಾರುಕಟ್ಟೆಯ ನೀಲ ನಕ್ಷೆ ಸಿದ್ದಪಡಿಸಲಾಗಿತ್ತು. ನಿರ್ಮಾಣ ಹಂತದಲ್ಲಿರುವ ನಗರಸಭೆಯ ಮೀನು ಮಾರುಕಟ್ಟೆಗೆ ಈ ಸೌಲಭ್ಯ ಕಲ್ಪಿಸಿಲ್ಲ. ನಿರ್ಮಾಣವಾಗಲಿರುವ ನಗರಸಭೆಯ ನೂತನ ಕಟ್ಟಡದಲ್ಲೂ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮೋಹನರಾಜ್‌ ಮೀನು ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಗಾಂಧಿ ಮಾರುಕಟ್ಟೆಯಲ್ಲಿಯೂ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಇದೆ ಎಂದು ತಿಳಿಸಿದರು. ನಗರಸಸಭೆಯ ಉದ್ಯಾನವನದಲ್ಲಿ ಹುತಾತ್ಮ ಯೋಧ ವಿಜಯಾನಂದ ನಾಯ್ಕ ಅವರು ಪುತ್ಥಳಿಯನ್ನು ನಿರ್ಮಿಸಬೇಕು ಎನ್ನುವ ವಿಷಯನ್ನು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯರು ತಮ್ಮ ಸಹಮತವಿದೆ ಎಂದು ಹೇಳಿದರು. ಈ ವೇಳೆ ನಗರಸಭೆ ಆಯುಕ್ತ ಯೋಗೇಶ್ವರ್‌ ಅವರು ಮಾತನಾಡಿ, ನಕ್ಸಲರು ಇಟ್ಟಿದ್ದ ನೆಲ ಬಾಂಬಿಗೆ ಬಲಿಯಾದ ಯೋಧರ ಹತ್ಯೆಯನ್ನು ನಾವೆಲ್ಲ ಖಂಡಿಸಬೇಕಾಗಿದೆ. ವಿಜಯಾನಂದ ಅವರ ಪುತ್ಥಳಿ ನಿರ್ಮಾಣ ಮಾಡುವುದರ ಬಗ್ಗೆ ತಾವು ಸರಕಾರಕ್ಕೆ ಹಾಗೂ ಉನ್ನತಾಧಿಕಾರಿಗೆ ಪತ್ರ ಬರೆಯುವುದಾಗಿ ಸಭೆಯ ಗಮನಕ್ಕೆ ತಿಳಿಸಿದರು. ನಗರಸಭೆ ಉದ್ಯಾನವನದಲ್ಲಿ ಪುತ್ಥಳಿ ನಿರ್ಮಾಣ ಮಾಡುವ ವಿಷಯದಲ್ಲಿ ಡಾ. ನಿತೀನ ಪಿಕಳೆ, ಈ ಹಿಂದೆ ನಿರ್ಮಾಣ ಮಾಡಿರುವ ಪುತ್ಥಳಿಗಳಿಗೆ ಸೂಕ್ತ ರಕ್ಷಣೆ, ನಿರ್ವಹಣೆ ಇಲ್ಲ. ವಿಜಯಾನಂದರ ಪುತ್ಥಳಿ ನಿರ್ಮಾಣವಾದರೆ ಅದರ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗಬೇಕು. ಇಲ್ಲದಿದ್ದರೇ ಪುತ್ಥಳಿಗೆ ಅವಮಾನ ಮಾಡಿದಂತಾಗುತ್ತಿದೆ. ಇದರ ಜೊತೆಗೆ ಹುತಾತ್ಮ ಯೋಧ ವಿಜಯಾನಂದ ಅವರ ಕುಟುಂಬಕ್ಕೆ ನಗರಸಭೆಯಿಂದ ಸಹಾಯಧನ ನೀಡುವುರ ಬಗ್ಗೆ ಚರ್ಚೆ ಮಾಡುವುದು ಸೂಕ್ತ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯ ಸಂತೋಷ ಗುರುಮಠ ಅವರು ಸಹಮತ ವ್ಯಕ್ತಪಡಿಸಿ, ತಾಲೂಕಿನ ಹುತಾತ್ಮ ಯೋಧರ ಜೀವನ ಚರಿತ್ರೆಯನ್ನು ಮ್ಯೂಜಿಯಂ ರೂಪದಲ್ಲಿ ನಿರ್ಮಿಸುವುದು ಸೂಕ್ತ ಎಂದರು. ಕಳೆದ 15 ವರ್ಷದಲ್ಲಿ ಹಲವು ಬಾರಿ ವಸತಿ ರಹಿತರಿಂದ ನಗರಸಭೆಯು ಅರ್ಜಿ ಸ್ವೀಕರಿಸಿದೆ. ಆದರೆ, ಇದುವರೆಗೂ ಅವರಿಗೆ ಸೌಲಭ್ಯ ಒದಗಿಸಿಲ್ಲ ಎಂದು ಸದಸ್ಯ ದೇವಿದಾಸ ನಾಯ್ಕ ಸಭೆಯಲ್ಲಿ ಆರೋಪಿಸಿದರು. ಅಧ್ಯಕ್ಷ ಗಣಪತಿ ನಾಯ್ಕ ಈ ವಿಷಯಕ್ಕೆ ಸಿಬ್ಬಂದಿಸಿ ಅರುಣಕುಮಾರ ಹಬ್ಬು ಅವರನ್ನು ತರಾಟೆಗೆ ತೆಗೆದುಕೊಂಡರು. ಪೌರಾಯುಕ್ತ ಯೋಗೇಶ್ವರ ಈ ಬಗ್ಗೆ ಸ್ಪಷ್ಟನೆ ನೀಡಿ, ವಸತಿ ಯೋಜನೆ ಜಾರಿಗೆ ನಗರದಲ್ಲಿ ಸರ್ಕಾರಿ ಭೂಮಿ ಲಭ್ಯವಿಲ್ಲ. ಇದರಿಂದ ನಗರಸಭೆ ವ್ಯಾಪ್ತಿ ಬಿಟ್ಟು ಹೊರ ವಲಯದಲ್ಲೂ ಯೋಜನೆ ಜಾರಿಗೆ ವಸತಿ ಸಚಿವರು ಇತ್ತೀಚೆಗೆ ಅನುಮತಿ ನೀಡಿದ್ದಾರೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು. ನಗರದ ಬೈತಖೋಲ್‌, ಬಿಣಗಾ ಸೇರಿದಂತೆ ಹಲವೆಡೆಯ 40 ದೀಪಗಳಲ್ಲಿ ಐದಾರೂ ರಾತ್ರಿ ವೇಳೆ ಉರಿಯುತ್ತಿಲ್ಲ. ಆದರೂ ಹೆಸ್ಕಾಂಗೆ ನಗರಸಭೆ ಬಿಲ್‌ ಪಾವತಿಸುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಸದಸ್ಯ ರಮೇಶ ಗೌಡ ಒತ್ತಾಯಿಸಿದರು. ಈ ವೇಳೆ 9 ಲಕ್ಷ ವೆಚ್ಚದಲ್ಲಿ ಪ್ಯಾನಲ್‌ ಬೋರ್ಡ್‌ ಅಳವಡಿಕೆ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸಭೆಯ ಪ್ರಾರಂಭದಲ್ಲಿ ಹುತಾತ್ಮ ಯೋಧ ವಿಜಯಾನಂದ ನಾಯ್ಕ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ್‌, ಸ್ಥಾಯಿ ಸಮಿತಿ ಅಧ್ಯಕ್ಷ ವಿಠ್ಠಲ ಸಾವಂತ ಇದ್ದರು.

loading...