ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಅಧಿಸೂಚನೆ ಪ್ರಕಟ

0
7
loading...

ಜಿಲ್ಲೆಯಲ್ಲಿ 2 ನಗರಸಭೆ-2 ಪುರಸಭೆ-1 ಪಟ್ಟಣ ಪಂಚಾಯತಿ ನಾಮಪತ್ರ ಸಲ್ಲಿಕೆ ಆರಂಭ
ಕನ್ನಡಮ್ಮ ಸುದ್ದಿ-ಹಾವೇರಿ: ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಗಸ್ಟ್ 10ರ ಶುಕ್ರವಾರವಾದ ಇಂದು ಅಧಿಸೂಚನೆ ಪ್ರಕಟಿಸಲಾಗಿದ್ದು, ಇಂದಿನಿಂದ ಆಗಸ್ಟ್ 17ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಡಾ.ಎಂ.ವಿ.ವೆಂಕಟೇಶ್ ಅವರು ತಿಳಿಸಿದ್ದಾರೆ.
ಅ.10 ರಂದು ವೇಳಾಪಟ್ಟಿ ಪ್ರಕಟಗೊಳ್ಳಲಿದ್ದು ನಾಮಪತ್ರ ಸಲ್ಲಿಕೆ ಶುಕ್ರವಾರದಿಂದ ಆರಂಭವಾಗಲಿದ್ದು ಅ.17 ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ನಾಮ ಪತ್ರ ಹಿಂಪಡೆಯಲು ಅ.20ರವರೆಗೆ ಅವಕಾಶವಿದ್ದು ಅ.29 ರಂದು, ಬುಧವಾರ ಮತದಾನ ಹಾಗೂ ಸೆ.1ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹಾವೇರಿ, ರಾಣೇಬೆನ್ನೂರ ನಗರಸಭೆಗಳು, ಹಾನಗಲ್ಲ ಮತ್ತು ಸವಣೂರು ಪುರಸಭೆಗಳು ಹಾಗೂ ಹಿರೇಕೆರೂರಿನ ಪಟ್ಟಣ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಐದು ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 136 ವಾರ್ಡುಗಳಲ್ಲಿ ಚುನಾವಣೆ ನಡೆಯಲಿದ್ದು ಈ ಕಾರ್ಯಕ್ಕಾಗಿ ಒಟ್ಟು ಹದಿನೇಳು ಜನ ಚುನಾವಣಾಧಿಕಾರಿಗಳು ಹಾಗೂ ಅಷ್ಟೇ ಸಂಖ್ಯೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಸ್ಥಳ: ಹಾವೇರಿ ನಗರ ಸಭಾ ಚುನಾವಣೆಗೆ ಸಂಬಂದಿಸಿದಂತೆ ಚುನಾವಣಾಧಿಕಾರಿಗಳ ಕಚೇರಿಗಳನ್ನು ಹಾವೇರಿ ನಗರಸಭಾ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿದ್ದು ಉಳಿದ ಕಡೆಗಳಲ್ಲಿ ತಹಸಿಲ್ದಾರರ ಕಾರ್ಯಾಲಯಗಳಲ್ಲಿ ಕಾರ್ಯನಿರ್ವಹಿಸಲಿವೆ. ಮತದಾನ ಕಾರ್ಯಕ್ಕಾಗಿ ಒಟ್ಟು 208 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಈ ಪೈಕಿ 202 ಮೂಲ ಮತಗಟ್ಟೆಗಳಾಗಿದ್ದರೆ 6 ಹೆಚ್ಚುವರಿ ಮತಗಟ್ಟೆಗಳಾಗಿವೆ. ಇದರಲ್ಲಿ 65 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ 29 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿ ತಾಲೂಕಿಗೆ ಒಬ್ಬರಂತೆ 5 ನೋಡಲ್ ಅಧಿಕಾರಿಗಳನ್ನು ಮೇಲುಸ್ತುವಾರಿಗಾಗಿ ನಿಯೋಜಿಸಲಾಗಿದೆ. ಮತದಾನ ಕಾರ್ಯಕ್ಕಾಗಿ ಸುಮಾರು 1000 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ಪೈಕಿ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳನ್ನು ಅವರು ಕಾರ್ಯನಿರ್ವಹಿಸುತ್ತಿರುವ ತಾಲೂಕನ್ನು ಹೊರತುಪಡಿಸಿ ಬೇರೆ ತಾಲೂಕಿಗೆ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
2.05 ಲಕ್ಷ ಮತದಾರರು: ಈಗಾಗಲೆ ವಿಧಾನಸಭಾ ಮತದಾರಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಕರಡು ಹಾಗೂ ಅಂತಿಮ ಮತದಾರ ಪಟ್ಟಿಗಳನ್ನು ಪ್ರಕಟಿಸಲಾಗಿದೆ. 2,05,199 ಮತದಾರರು ಮತಚಲಾಯಿಸಲಿದ್ದು ಈ ಪೈಕಿ 1,03,762 ಪುರುಷರು, 1,01,392 ಮಹಿಳೆಯರು, 4 ತೃತೀಯ ಲಿಂಗದವರು ಹಾಗೂ 41 ಸೇವಾ ಮತದಾರರಿದ್ದಾರೆ. 1400 ಕ್ಕಿಂತ ಹೆಚ್ಚಿನ ಮತದಾರರನ್ನು ಹೊಂದಿದ ಮತಗಟ್ಟೆಗಳಲ್ಲಿ ಹೆಚ್ಚವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದವರು ಈ ಜಿಲ್ಲೆಗೆ ಹಂಚಿಕೆ ಮಾಡಿದ ಇ.ವಿ.ಎಂಗಳನ್ನು ಈ ಚುನಾವಣೆಯಲ್ಲಿ ಬಳಸಲಾಗುವುದು. ಸದರಿ ಇ.ವಿ.ಎಂಗಳ ಪ್ರಥಮ ಹಂತದ ತಪಾಸಣೆ (ಎಫ್‍ಎಲ್‍ಸಿ) ಮಾಡಿ ಚುನಾವಣೆಗಾಗಿ ಸಿದ್ಧಪಡಿಸಲಾಗಿದೆ. ನೋಟಾಗೆ ಅವಕಾಶ ಕಲ್ಪಿಸಲಾಗಿದ್ದು ವಿವಿ ಪ್ಯಾಟ್ ಬಳಸುವುದಿಲ್ಲ. ಪ್ರಥಮಬಾರಿಗೆ ಮತಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಮುದ್ರಿಸಲಾಗುವದು ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳ ವೆಚ್ಚದ ಮಿತಿ: ಈ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲಿಸಲು ಅಧಿಕಾರಿಗಳನ್ನು ನೇಮಿಸಲಾಗಿದ್ದು ನಗರಸಭೆಗೆ 2.00ಲಕ್ಷ ರೂ., ಪುರಸಭೆಗೆ 1.5 ಲಕ್ಷ ರೂ. ಹಾಗೂ ಪಟ್ಟಣ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ 1.00 ಲಕ್ಷ ರೂ.ಗಳ ಗರಿಷ್ಠ ವೆಚ್ಚದ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ನೀತಿ ಸಂಹಿತೆ ಜಾರಿ: ಅಧಿಸೂಚನೆಯ ದಿನದಿಂದಲೇ ಮಾದರಿ ನೀತಿಸಂಹಿತೆಯು ಜಾರಿಯಲ್ಲಿದ್ದು ಇದರ ಕಟ್ಟು ನಿಟ್ಟಿನ ಅನುಪಾಲನೆಗಾಗಿ ಎಂಸಿಸಿ ತಂಡಗಳು, ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಆಯಕಟ್ಟಿನ ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಲಾಗಿದೆ.
ಸೂಕ್ತ ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಲಗತ್ತಿಸುವುದು, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವುದನ್ನು ಪ್ರತಿಬಂಧಿಸಲಾಗಿದ್ದು ಪ್ಲಾಸ್ಟಿಕ್ ಮುಕ್ತ ಚುನಾವಣೆಗಳನ್ನು ನಡೆಸಲು ಸಹಕರಿಸುವಂತೆ ರಾಜಕೀಯ ಪಕ್ಷಗಳ ಜೊತೆಗೆ ನಡೆಸಲಾದ ಸಭೆಯಲ್ಲಿ ಕೋರಲಾಗಿದೆ.
ಬರಲಿರುವ ನಗರಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಶಾಂತರೀತಿಯಿಂದ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಅವರು ಕೋರಿದ್ದಾರೆ.

loading...