ನಾಟಕ ಕಲೆಯಿಂದ ಮಕ್ಕಳ ಭಾಷಾ ಶುದ್ಧತೆ ಅಭಿವೃದ್ಧಿ: ನಿಂಗಣ್ಣ

0
4
loading...

ಕನ್ನಡಮ್ಮ ಸುದ್ದಿ-ಧಾರವಾಡ: ಮಕ್ಕಳ ದೈಹಿಕ, ಕಲಿಕೆ ಹಾಗೂ ಮಾನಸಿಕ ಬೆಳವಣಿಗೆಗೆ ರಂಗಕಲೆ ಪೂರಕವಾಗಿದ್ದು ಮಕ್ಕಳ ಕಲಿಕೆ ಆಸಕ್ತಿದಾಯವಾಗಿರುವಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ ಎಂದು ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಹೇಳಿದರು.
ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸಿದ್ಧಲಿಂಗೇಶ್ವರ ಸಾಮಾಜಿಕ ಅಭಿವೃದ್ಧಿ ಸೇವಾ ಸಂಸ್ಥೆಯು ಸಂಘಟಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಕ್ಕಳ ನಾಟಕ ಯೋಜನೆಯ “ಚಿಣ್ಣರ ಚಿಲುಮೆ” ನಾಟಕ ರಂಗ ತರಬೇತಿ ಸಮಾರೋಪ ಸಮಾರಂಭದಲ್ಲಿ ಸಿದ್ಧಗೊಂಡ ಆರ್.ವಿ. ಭಂಡಾರಿಯವರ ಮಕ್ಕಳ ನಾಟಕ ‘ಪ್ರೀತಿಯ ಕಾಳು’ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ರಂಗಭೂಮಿ ದೂರವಿಟ್ಟು ಕಲಿಸುವ ಕ್ರಿಯೇ ಪರಿಪೂರ್ಣ ಕಲಿಕೆಯಾಗಲಾರದು ನಾಟಕ ಕಲೆಯಿಂದ ಮಕ್ಕಳ ಭಾಷಾ ಶುದ್ಧತೆಯಾಗುವುದು, ಅವರ ಕಲಿಕೆಯಲ್ಲಿ ಉತ್ಸುಕತೆ ಹೆಚ್ಚುವುದು, ಜೊತೆಗೆ ಆತ್ಮಸ್ಥೈರ್ಯ ಹೆಚ್ಚುವುದು. ಪ್ರಾಥಮಿಕ ಶಿಕ್ಷಣದಲ್ಲಿ ನಾಟಕ ರಂಗಕಲೆಯನ್ನು ಅಳವಡಿಸುವದಕ್ಕೆ ಸರಕಾರ ಮುಂದಾಗಬೇಕು ಎಂದರು.
ಪ್ರತಿಯೊಂದು ಶಾಲೆಗೆ ಒಬ್ಬ ರಂಗಭೂಮಿ ಶಿಕ್ಷಕ ನೇಮಕಗೊಳ್ಳುವಂತೆ ನೋಡಿಕೊಳ್ಳಬೇಕು. ಅವರು ಉಳಿದ ವಿಷಯ ಶಿಕ್ಷಕರಿಗೆ ರಂಗ ಚಟುವಟಿಕೆಗಳೊಂದಿಗೆ ಕಲಿಸುವಂತೆ ಮಾಡಲು ಸಹಕರಿಸಬೇಕು. ಅಂದಾಗಲೇ ಮಕ್ಕಳಲ್ಲಿ ಶಾಲೆಯತ್ತ ಆಕರ್ಷಣೆಯಾಗಿ ಡ್ರಾಪೌಟ್ ಸಂಖ್ಯೆ ಕಡಿಮೆಯಾಗಲು ಸಾಧ್ಯ ಎಂದರು.ಎಂ.ಎಂ. ಚಿಕ್ಕಮಠ ಮಾತನಾಡಿ, ಸರಕಾರದ ಈ ಯೋಜನೆ ಅತ್ಯಂತ ಶ್ರೇಷ್ಠವಾದ ಯೋಜನೆ ಇದಾಗಿದೆ. ಇದರ ಮೂಲಕ ಮಕ್ಕಳ ನಾಟಕ ರಂಗಭೂಮಿಗೆ ಹೊಸ ಆಯಾಮ ಮತ್ತು ಶಕ್ತಿ ತುಂಬಲು ಸಾಧ್ಯವಾಗುತ್ತದೆ ಎಂದರು. ನಮ್ಮಶಿಕ್ಷಕರು ಹಾವಭಾವಗಳೊಂದಿಗೆ ಪಾಠ ಹೇಳಿದರೆ ಮಕ್ಕಳು ಹೆಚ್ಚು ಲಕ್ಷವಹಿಸುವರು ಎಂಬುದು ಗೊತ್ತಿದ್ದರೂ ಆಕರ್ಷದಾಯಕ ಕಲಿಕೆಗೆ ಮುಂದಾಗದಿರುವುದು ಖೇದಕರ. ಮಕ್ಕಳಲ್ಲಿಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯವೂ ಈ ಯೋಜನೆಯಿಂದ ಆಗುತ್ತಿರುವುದು ಸಂತಸ ತಂದಿದೆ ಎಂದರು.
ಶಿಕ್ಷಕಿ ವಿ.ಎನ್. ಕೀರ್ತಿವತಿ ಮಾತನಾಡಿ, ಮಗು ಹುಟ್ಟಿನಿಂದಲೇ ಮನುಷ್ಯನ ಹಾವಭಾವವನ್ನು ಗ್ರಹಿಸುತ್ತಲೇ ಬೆಳೆಯುತ್ತಾ ಅದರಂತೆ ತಾನೂ ವ್ಯಕ್ತಪಡಿಸಲು ಪ್ರಯತ್ನಿಸುತ್ತದೆ. ಅಲ್ಲಿಂದಲೇ ನಾಟಕದ ಕಲೆಯನ್ನು ಮಗು ಕರಗತ ಮಾಡಿಕೊಳ್ಳುತ್ತಾ ನಡೆಯುವುದು. ಪ್ರತಿ ಮಗುವಿನಲ್ಲಿ ಈ ಕಲೆ ಸೂಪ್ತವಾಗಿರುತ್ತದೆ. ಇಂಥ ಅವಕಾಶ ಸಿಕ್ಕಾಗ ಅವರೊಳಗಿನ ಕಲಾವಿದ ಜಾಗ್ರತಾವಸ್ಥೆಗೆ ಬರುವನು. ಆ ಮೂಲಕ ಮಗು ಹೆಚ್ಚೆಚ್ಚು ಕ್ರಿಯಾಶೀಲವಾಗುವುದು ಎಂದರು. ಸುನಂದಾ ನಿಂಬಗೌಡರ ಸ್ವಾಗತಿಸಿದರು. ಚಿದಾನಂದ ಮಾಸನಕಟ್ಟಿ ವಂದಿಸಿದರು. ಪ್ರಮಿಳಾ ಜಕ್ಕನ್ನವರ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ, ಪ್ರಭುಗೌಡ ಪಾಟೀಲ ಉಪಸ್ಥಿತರಿದ್ದರು. ನಂತರ ನವಲೂರ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಆರ್.ವಿ.ಭಂಡಾರಿ ಬರೆದ “ಪ್ರೀತಿಯ ಕಾಳು” ನಾಟಕವನ್ನು ಪ್ರದರ್ಶಿಸಿದರು.

loading...