ನಾಟಕ ಪ್ರಭಾವಶಾಲಿ ಮಾಧ್ಯಮ: ಬಳಿಗೇರ

0
0
loading...

ಕನ್ನಡಮ್ಮ ಸುದ್ದಿ-ಗದಗ: ನಾಟಕಗಳು ಪ್ರೇಕ್ಷಕನಲ್ಲಿ ಮೌಲ್ಯಗಳ ವೃದ್ಧಿಯ ಜೊತೆಗೆ ಮನರಂಜನೆ ಒದಗಿಸುವ ಪ್ರಭಾವಶಾಲಿ ಮಾಧ್ಯಮವಾಗಿದೆ. ಉತ್ತಮ ಕರ್ನಾಟಕದ ವೃತ್ತಿ ರಂಗಭೂಮಿ ಶ್ರೀಮಂತಿಕೆ ಹೊಂದಿದ್ದು, ಶಿರಹಟ್ಟಿ ನಾಟಕ ಕಂಪನಿ ವೆಂಕೋಬರಾಯರ ವೃತ್ತಿ ನಿಷ್ಠೆ ಮತ್ತು ರಂಗಪ್ರೀತಿಯ ಮೂಲಕ ಅನೇಕ ಪ್ರಥಮಗಳನ್ನು ದಾಖಲಿಸಿದೆ. ಬಾಲ್ಯದಲ್ಲಿನ ನಾಟಕದ ಒಲವು ಚಿಗುರೊಡೆದು ಸಮಾನಮನಸ್ಕರ ಜೊತೆಗೂಡಿ 1906ರಲ್ಲಿ ನಾಟಕ ಪ್ರದರ್ಶನ ಮಾಡುವ ಮೂಲಕ ಜನಮಾನಸವನ್ನು ಗೆದ್ದು ರಂಗಪ್ರವೇಶ ಮಾಡಿದರು. ನಾಟಕ ಕಂಪನಿಯ ಸ್ಥಾಪನೆಯ ಮೂಲಕ ನಾಡಿನಾದ್ಯಂತ ಸಂಚರಿಸಿ 31ಕ್ಕೂ ಅಧಿಕ ನಾಟಕಗಳನ್ನು ಅನೇಕ ವರ್ಷಗಳ ಕಾಲ ಪ್ರದರ್ಶಿಸಿ ಸೈ ಎನಿಸಿಕೊಂಡರು ಎಂದು ಶಿರಹಟ್ಟಿ ತಾಲೂಕು ಮಾಜಿ ಕಸಾಪ ಅಧ್ಯಕ್ಷ ಕೆ.ಎ.ಬಳಿಗೇರ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ವಾರದ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಂಪನಿಯ ಲಾಭವನ್ನು ಕಲಾವಿದರಿಗೆ ಹಂಚುವ ಮೂಲಕ ಅಧಿಕ ವೇತನ ನೀಡುತ್ತಿದ್ದರು. ರಂಗಸಜ್ಜಿಕೆ, ವೇಷಭೂಷಣ, ವಿದ್ಯುದಾಲಂಕಾರಗಳ ಮೂಲಕ ಪ್ರಥಮಬಾರಿಗೆ ರಂಗಭೂಮಿಗೆ ಹೊಸತನವನ್ನು ತಂದರು. ಸ್ತ್ರೀಪಾತ್ರಕ್ಕೆ ಮಹಿಳೆಯರಿಗೆ ಅವಕಾಶವನ್ನು ನೀಡುವ ಮೂಲಕ ಸ್ತ್ರೀಯರ ರಂಗಪ್ರವೇಶಕ್ಕೆ ಅನುವು ಮಾಡಿಕೊಟ್ಟರು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಶರಣು ಗೋಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನವರಸಗಳನ್ನು ಒಟ್ಟಾಗಿ ಊಡಬಡಿಸುವ ನಾಟಕಗಳು ಸಮಾಜದ ಅಂಗವಾಗಿದ್ದವು. ವೆಂಕೋಬರಾಯರು, ಪುಟ್ಟರಾಜಗವಾಯಿಗಳು, ಮಹಾಂತೇಶ ಶಾಸ್ತ್ರಿಗಳು, ಎಚ್‌.ಎನ್‌.ಹೂಗಾರ ಮೊದಲಾದವರು ನಾಟಕ ಕ್ಷೇತ್ರವನ್ನು ಶ್ರೀಮಂತಗೊಳಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಮಾಧುರಿ ಕುಲಕರ್ಣಿ ಕವನ ಓದಿದರು, ಪ್ರಕಾಶ ಮಂಗಳೂರ ನಿರೂಪಿಸಿದರು. ಗೌರವ ಕಾರ್ಯದರ್ಶಿ ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಬಾಹುಬಲಿ ಜೈನರ್‌ ವಂದಿಸಿದರು.

loading...