ನಿವೇಶನ ಹಂಚಿಕೆಯ ಅವ್ಯವಹಾರ ಸತ್ಯಕ್ಕೆ ದೂರ

0
12
loading...

ಕನ್ನಡಮ್ಮ ಸುದ್ದಿ-ಕುಮಟಾ: ಇಲ್ಲಿನ ಎಪಿಎಂಸಿಯ 3 ಸದಸ್ಯರ ಸದಸ್ಯತ್ವ ಮತ್ತು ನಿವೇಶನ ಹಂಚಿಕೆಯ ಅವ್ಯವಹಾರ ಕುರಿತು ಎಪಿಎಂಸಿ ಸದಸ್ಯ ಆರ್ ಎಚ್ ನಾಯ್ಕ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ರಾಮನಾಥ ಶಾನಭಾಗ (ಧೀರೂ) ಸ್ಪಷ್ಟೀಕರಣ ನೀಡಿದರು.
ಅವರು ಗುರುವಾರ ಪತ್ರಕರ್ತರಿಗೆ ಮಾತನಾಡಿ, 2017ರಲ್ಲಿ ಎಪಿಎಂಸಿಗೆ ನಡೆದ ಚುನಾವಣೆಯಲ್ಲಿ ರೈತ ಕ್ಷೇತ್ರದಿಂದ 2 ಸದಸ್ಯರು ಹಾಗೂ ವರ್ತಕ ಕ್ಷೇತ್ರದಿಂದ ಒಬ್ಬ ಸದಸ್ಯರು ಎಪಿಎಂಸಿ ಹಾಗೂ ಸಹಕಾರಿ ಸಂಘಗಳ ನಿಯಮಾವಳಿಯಂತೆ ಕ್ರಮಬದ್ಧವಾಗಿ ಆಯ್ಕೆಗೊಂಡಿರುತ್ತಾರೆ. ಆದರೆ, ಎಪಿಎಂಸಿ ಸದಸ್ಯ ಆರ್ ಎಚ್ ನಾಯ್ಕ ಅವರು ಸಂಪೂರ್ಣ ಮಾಹಿತಿ ಮತ್ತು ನಿಯಮಗಳನ್ನು ತಿಳಿದುಕೊಳ್ಳದೇ ಆರೋಪ ಮಾಡಿರುವುದು ತಿಳಿಗೇಡಿತನ. ಇದು ಅಗ್ಗದ ಪ್ರಚಾರಕ್ಕೆ ಬಳಸುತ್ತಿರುವ ತಂತ್ರ ಎಂದು ಧೀರೂ ಶಾನಭಾಗ ಆಪಾದಿಸಿದರು.

ಎಪಿಎಂಸಿ ಸದಸ್ಯ ಆರ್ ಎಚ್ ನಾಯ್ಕ ಆರೋಪದಂತೆ 3 ಸದಸ್ಯರ ಆಯ್ಕೆ ಕಾಯ್ದೆಯ ವಿರುದ್ಧ ಎಂದು ದಾಖಲೆಗಳೊಂದಿಗೆ ದೃಢೀಕರಿಸಿದರೆ ತಕ್ಷಣ ರಾಜೀನಾಮೆ ನೀಡಲು ಬದ್ಧರು. 15 ದಿನಗಳೊಳಗೆ ದೃಢೀಕರಿಸದಿದ್ದರೆ ಆರ್ ಎಚ್ ನಾಯ್ಕ ರಾಜೀನಾಮೆ ನೀಡಬೇಕೆಂದು ಧೀರೂ ಸವಾಲು ಹಾಕಿದರು. ಇದಲ್ಲದೇ ಎಪಿಎಂಸಿ ಸೇರಿದ ಆಸ್ತಿ ಹಂಚಿಕೆಯಲ್ಲಿ ಅಕ್ರಮ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು ಸುಮಾರು 10 ವರ್ಷಗಳ ಹಿಂದೆ 2008 ರಲ್ಲಿ ಅಂದಿನ ಆಡಳಿತ ಸಮಿತಿ ಆಸ್ತಿ ಹಂಚಿಕೆ ನಿಯಮಾವಳಿ 2004ರ ನಿಯಮದಂತೆ ಹಂಚಿಕೆ ಮಾಡಿದೆ. ಈ ಭೂ ಹಂಚಿಕೆ ನಮ್ಮ ಅಧಿಕಾರಾವಧಿಯಲ್ಲಿ ನಡೆದಿರುವುದಿಲ್ಲ. ಹೀಗಾಗಿ ಈ ಕುರಿತು ಆರ್ ಎಚ್ ನಾಯ್ಕ ಮಾಡಿರುವ ಆರೋಪ ನಮಗೆ ಸಂಬಂಧಪಡುವುದಿಲ್ಲ. ವರ್ತಕ ಪ್ರತಿನಿಧಿಯಾಗುವ ವ್ಯಕ್ತಿಗೆ ಎಪಿಎಂಸಿ ಕಾಯ್ದೆಯಲ್ಲಿ ಯಾವುದೇ ನಿಯಮವಿಲ್ಲ. ವರ್ತಕ ಲೈಸೆನ್ಸ್‍ನ್ನು ಕಡ್ಡಾಯವಾಗಿ ಹೊಂದಿರತಕ್ಕದು. ಇನ್ನಿತರ ಯಾವುದೇ ಸಂಸ್ಕರಣಾ ಸಹಕಾರಿಯನ್ನು ಆತ ಪ್ರತಿನಿಧಿಸಬಹುದು. ಅಲ್ಲದೇ ಬೇರೆ ಸೌಹಾರ್ದ ಸಹಕಾರಿಯಲ್ಲಿ ಇರುವ ಕಾರಣ ಆತನ ಸದಸ್ಯತ್ವ ರದ್ದಾಗುವುದಿಲ್ಲ. ಅಲ್ಲದೇ ಆತ ವರ್ತಕ ಕ್ಷೇತ್ರಕ್ಕೆ ಸ್ಪರ್ಧಿಸಲು ನಿರ್ಬಂಧವಿರುವ ಯಾವುದೇ ನಿಯಮ ಎಪಿಎಂಸಿಯಲ್ಲಿ ಇಲ್ಲ. ಎಪಿಎಂಸಿ ಹುಸಿ ಆರೋಪಗಳಿಂದ ರೈತರು ವಿಚಲಿತರಾಗದೇ ಎಪಿಎಂಸಿ ಜೊತೆಗಿನ ವ್ಯವಹಾರಿಕ ಸಂಬಂಧಗಳನ್ನು ಮುಂದುವರೆಸಿ ಅದರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ರೈತರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಎಪಿಎಂಸಿ ಉಪಾಧ್ಯಕ್ಷ ರಮೇಶ ಪ್ರಸಾದ್, ಸದಸ್ಯರಾದ ರಾಜೇಶ ಬಾಳಗಿ, ಅರವಿಂದ ಪೈ, ಶಾಂತರಾಜ್ ಜೈನ್, ಸಂಗೀತಾ ಆರ್ ನಾಯ್ಕ, ಗೌರಿ ಮಹೇಶ ಕಾಮತ, ದಲಾಲ ಸಂಘದ ಪ್ರಕಾಶ ಭಟ್, ಮಂಜುನಾಥ ಹಳ್ಳೇರ, ಶಿವು ಮುಕ್ರಿ, ಎಪಿಎಂಸಿ ಕಾರ್ಯದರ್ಶಿ ಎಂ ಸಿ ಪಡಗನೂರ್ ಹಾಗೂ ಇತರರು ಉಪಸ್ಥಿತರಿದ್ದರು.

loading...