ಪಾಳು ಬಿದ್ದ ಕಲಾಗ್ಯಾಲರಿ: ಚಿತ್ರಕಲಾ ಪ್ರದರ್ಶನಕ್ಕೆ ಅಡ್ಡಿ

0
6
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರದ ಕೇಂದ್ರ ಭಾಗದಲ್ಲಿರುವ ಇಂದಿರಾಗಾಜಿನ ಮನೆಯ ಆವರಣದೊಳಗಿದ್ದ ಎಂ.ವಿ.ಮಿಣಜಗಿ ಹೆಸರಿನ ಕಲಾ ಗ್ಯಾಲರಿ ಈಗ ಪಾಳುಬಿದ್ದಿದೆ. ಇದರಿಂದಾಗಿ ಈ ಭಾಗದ ಕಲಾವಿದರಿಗೆ ಚಿತ್ರಕಲಾ ಪ್ರದರ್ಶನಕ್ಕೆ ವೇದಿಕೆಯೇ ಇಲ್ಲದಂತಾಗಿ ಕಲಾವಿದರ ಹೊಟ್ಟೆಗೆ ಬರೆ ಎಳೆದಂತಾಗಿದೆ.
ಎಷ್ಟು ಮಂದಿ ಕಲಾವಿದರು ಬೆಂಗಳೂರಿಗೇ ಹೋಗಿ ಕಲಾಪ್ರದರ್ಶನ ಮಾಡಲು ಸಾಧ್ಯ. ಈ ಗ್ಯಾಲರಿ ಮರಳಿ ಆರಂಭಿಸಲು ಒತ್ತಾಯಿಸಿ ಜನಪ್ರತಿನಿಧಿಗಳಿಗೆ, ಮಹಾನಗರ ಪಾಲಿಕೆಗೆ ಕಲಾವಿದರು ನೀಡಿದ ಮನವಿಗೆ ಸ್ಪಂದನೆಯೇ ಸಿಗುತ್ತಿಲ್ಲ. ಹೀಗಾಗಿ ಕಲಾವಿದರು ಚಿತ್ರಕಲಾ ಪ್ರದರ್ಶನ ಮಾಡುವುದಾದರೆ ಧಾರವಾಡದ ಸರ್ಕಾರಿ ಕಲಾ ಗ್ಯಾಲರಿಗೆ ಅಲೆದಾಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಇದೊಂದೇ ಗ್ಯಾಲರಿಯಾಗಿರುವ ಕಾರಣ ಸಹಜವಾಗಿಯೇ ಬೇಡಿಕೆ ಹೆಚ್ಚು.
ಚಿತ್ರಕಲಾ ಪ್ರದರ್ಶನ ಮಾಡುವುದಾದರೆ ಕಾಯುವಂತಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ವರ್ಷ ಚಿತ್ರಕಲಾ ಪ್ರದರ್ಶನ ಮಾಡುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷ ಒಬ್ಬ ಕಲಾವಿದನಿಗೆ 50 ಸಾವಿರ ಅನುದಾನ ನೀಡುತ್ತದೆ. ಈ ಅನುದಾನ ಸೂಕ್ತವಾಗಿ ಸದುಪಯೋಗವಾಗಬೇಕು ಅಂದರೆ ಅದಕ್ಕೆ ತಕ್ಕುದಾದ ಗ್ಯಾಲರಿಯ ಅಗತ್ಯವಿದೆ. ಇದಕ್ಕಾಗಿ ಈ ಭಾಗದ ಜನಪ್ರತಿನಿಧಿಗಳ ಬಳಿ ಮನವಿ ಪತ್ರ ಹಿಡಿದುಕೊಂಡು ಬಹಳಷ್ಟು ಕಲಾವಿದರು ಅಲೆದಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವೂ ಆಗಿಲ್ಲ. ಇದೇ ವರ್ಷ (2018) ಕಲಾವಿದ ಡಾ.ಎಂ.ವಿ.ಮಿಣಜಗಿ ಅವರ ಜನ್ಮ ಶತಮಾನೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ, ಈ ಪಾಳುಬಿದ್ದ ಗ್ಯಾಲರಿಯ ಬೀಗ ತೆಗೆಸಿ ಅಲ್ಲಿಯೇ ಸುಮಾರು 30 ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮೇಯರ್ ಅವರನ್ನು ಕೂಡ ಕರೆಯಲಾಗಿತ್ತು. ಅವರು ಈ ವರ್ಷದ ಬಜೆಟ್‍ನಲ್ಲಿ ಸೂಕ್ತವಾದ ಅನುದಾನ ಇಡುವ ಮೂಲಕ ಈ ಕಲಾಗ್ಯಾಲರಿಯನ್ನು ಅಭಿವೃದ್ಧಿಪ ಪಡಿಸುವಂತೆ ಒತ್ತಾಯಿಸಲಾಗಿದೆ ಎನ್ನುತ್ತಾರೆ ಕಲಾವಿದ ಜಿ.ಬಿ.ಘಾಟ್ಗೆ.
ಇಂದಿರಾ ಗಾಜಿನ ಮನೆಯ ಆವರಣದ ನಿರ್ವಹಣೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೋಡುಕೊಳ್ಳುತ್ತದೆ. ಆದರೆ ಗಾಜಿನ ಮನೆಯಲ್ಲಿರುವ ಈ ಕಲಾಗ್ಯಾಲರಿಯನ್ನು ನಿರ್ವಹಣೆ ಮಾಡಿ ಕಲಾವಿದರಿಗೆ ಉತ್ತೇಜನ ನೀಡಬೇಕು ಎಂಬ ವಿಚಾರದಲ್ಲಿ ಮಾತ್ರ ಪಾಲಿಕೆ ನಿರುತ್ಸಾಹ ತೋರಿಸುತ್ತಿದೆ ಎಂಬ ದೂರು ಕಲಾವಿದರದ್ದು. ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿಯಾದ ಹುಬ್ಬಳ್ಳಿಯಲ್ಲಿ ವ್ಯವಸ್ಥಿತವಾದ ಕಲಾಗ್ಯಾಲರಿ ಇದ್ದರೆ ನೂರಾರು ಕಲಾವಿದರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಮಹಾನಗರ ಪಾಲಿಕೆ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು ಎಂಬುದು ಈ ಭಾಗದ ಎಲ್ಲ ಕಲಾವಿದರ ಒಕ್ಕೊರಲ ಆಗ್ರಹವಾಗಿದೆ.

loading...