ಪುರಸಭೆ ಚುನಾವಣೆಗೆ ಒಟ್ಟು 74 ನಾಮಪತ್ರಗಳ ಸಲ್ಲಿಕೆ

0
13
loading...

ಕನ್ನಡಮ್ಮ ಸುದ್ದಿ-ಕುಮಟಾ: ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ ವಿವಿಧ ಪಕ್ಷಗಳ ಜೊತೆಗೆ ಪಕ್ಷೇತರರು ಸೇರಿದಂತೆ ಒಟ್ಟು 74 ನಾಮಪತ್ರಗಳು ಸಲ್ಲಿಕೆಯಾಗಿವೆ.
ಪುರಸಭೆಯ 23 ವಾರ್ಡ್‍ಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‍ನಿಂದ ತಲಾ 23 ಮತ್ತು ಬಿಜೆಪಿಯಿಂದ 21 ನಾಮಪತ್ರಗಳು ಸಲ್ಲಿಕೆಯಾಗಿವೆ. ಜೆಡಿಎಸ್‍ನಿಂದ 17 ನಾಮಪತ್ರಗಳು ಸಲ್ಲಿಕೆಯಾಗಿವೆ. 13 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅ.17ರಂದು 10 ನಾಮಪತ್ರ ಸಲ್ಲಿಕೆಯಾಗಿತ್ತು. ಶನಿವಾರ 64 ನಾಮಪತ್ರ ಸಲ್ಲಿಕೆಯಾಗಿದ್ದು, ಒಟ್ಟು 74 ನಾಮಪತ್ರ ಸಲ್ಲಿಕೆಯಾಗಿದೆ. ಚುನಾವಣಾ ಅಧಿಕಾರಿಯಾಗಿ ತಹಸೀಲ್ದಾರ್ ಮೇಘರಾಜ ನಾಯ್ಕ ಕಾರ್ಯನಿರ್ವಹಿಸಿದ್ದರು.

ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ಪ್ರಮುಖರಾದ ರವಿಕುಮಾರ ಶೆಟ್ಟಿ, ವಿ.ಎಲ್. ನಾಯ್ಕ, ಸಚಿನ ನಾಯ್ಕ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳಾದ ತಾರಾ ಗೌಡ, ನಾಗರಾಜ ನಾಯ್ಕ, ವಿನಯಾ ಜಾರ್ಜ್ ಸೇರಿದಂತೆ ಇತರರು ನಾಮಪತ್ರ ಸಲ್ಲಿಸಿದರು. ಅಂತೆಯೇ ಬಿಜೆಪಿಯಿಂದ ಪಕ್ಷದ ಮುಖಂಡರ ಜೊತೆಗೆ ಪ್ರಸಾರಣ ನೆಟ್‍ವರ್ಕ್ ಮಾಲೀಕ ರಾಜೇಶ ಪೈ, ನಿಕಟಪೂರ್ವ ಸದಸ್ಯ ಪ್ರಶಾಂತ ನಾಯ್ಕ, ಸೇರಿದಂತೆ ಬಿಜೆಪಿ ಅಭ್ಯರ್ಥಿಗಳು ಭಾರಿ ಉತ್ಸುಕತೆಯಿಂದ ನಾಮಪತ್ರ ಸಲ್ಲಿಸಿದರು.
ಜೆಡಿಎಸ್‍ನಿಂದ ಜಿಪಂ ಸದಸ್ಯ ಪ್ರದೀಪ ನಾಯಕ ದೇವರಬಾವಿ, ಭಾಸ್ಕರ ಪಟಗಾರ, ಗಜು ನಾಯ್ಕ ನೇತೃತ್ವದಲ್ಲಿ ಜೆಡಿಎಸ್ ಅಭ್ಯರ್ಥಿಗಳಾದ ಸುಲಬ ಕಾಮತ್, ಶಂಕರ ಉಪ್ಪಾರ, ಈಶ್ವರ ಗೌಡ ಸೇರಿದಂತೆ ಇತರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಅಗಸ್ಟ್ 31ರಂದು ನಡೆಯಲಿರುವ ಪುರಸಭೆ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಅಗಸ್ಟ್ 20ರಂದು ನಡೆಯಲಿದ್ದು, ಅಗಸ್ಟ್ 23 ರಂದು ಉಮೇದುದಾರಿಕೆ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್ 3ರಂದು ಮತ ಏಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

loading...