ಪುರಸಭೆ ಚುನಾವಣೆ: ಕುತೂಹಲ ಕೆರಳಿಸಿದ ಸ್ಪರ್ಧೆ

0
22
loading...

ನಾಗರಾಜ ಶಹಾಪುರಕರ
ಕನ್ನಡಮ್ಮ ಸುದ್ದಿ-ಹಳಿಯಾಳ: ಪಟ್ಟಣ ಪಂಚಾಯತದಿಂದ ಬಡ್ತಿಯಾಗಿರುವ ಹಳಿಯಾಳ ಪುರಸಭೆಯ ಚುನಾವಣೆಯಲ್ಲಿ ಅಭಿವೃದ್ಧಿಗೆ ಹರಿದುಬಂದ ಸಾಕಷ್ಟು ಅನುದಾನದ ಜೊತೆಗೆ ಭ್ರಷ್ಟಾಚಾರದ ಗಂಭೀರ ಆರೋಪವೂ ಸಹ ಚುನಾವಣೆ ವಿಷಯವಾಗಲಿದೆ.

ತಮ್ಮ ಸ್ವ-ಊರನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸುವ ಸದುದ್ದೇಶದಿಂದ ರಾಜ್ಯದ ಹಿರಿಯ ಹಾಗೂ ಪ್ರಭಾವಿ ಸಚಿವ ಆರ್.ವಿ. ದೇಶಪಾಂಡೆಯವರು ಅಭಿವೃದ್ಧಿಗೆ ಹಣದ ಹೊಳೆಯನ್ನೇ ಹರಿಸಿದರು. ನಿರಂತರ ನೀರು ಸರಬರಾಜು, ಸ್ವಚ್ಛತೆ, ಎಲ್‍ಇಡಿ ಬೀದಿ ದೀಪಗಳ ಅಳವಡಿಕೆ ಮೂಲಭೂತ ಸೌಕರ್ಯಗಳು ಈ ವಿಷಯದಲ್ಲಿ ಹಳಿಯಾಳ ಪಟ್ಟಣವು ತನ್ನ ಗೌರವ ಹೆಚ್ಚಿಸಿಕೊಂಡಿದೆ.
ನಗರೋತ್ಥಾನ ಮೂರನೇ ಹಂತದ ಕಾಮಗಾರಿಗಳಿಗೆ 2018 ಜನೇವರಿ 26 ರಂದು ಕೆಲಸದ ಆದೇಶ ನೀಡಲಾಗಿದ್ದು, ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಮಳೆಗಾಲ ಹೊರತುಪಡಿಸಿ ಒಂದು ವರ್ಷದ ಕಾಲಾವಧಿ ನೀಡಲಾಗಿದೆ. ಈವರೆಗೆ ಶೇ. 50 ರಷ್ಟು ಕಾಮಗಾರಿ ಮುಗಿದಿದೆ. ಪುರಸಭೆಯ ಚುನಾಯಿತ ಜನಪ್ರತಿನಿಧಿಗಳಲ್ಲಿ ಹೆಚ್ಚಿನವರು ಹಾಗೂ ಸಿಬ್ಬಂದಿಗಳು ಕೆಲ ಆಕ್ಷೇಪಗಳನ್ನೊಳಗೊಂಡು ಸ್ಪಂದನೆ ನೀಡಿದ್ದಾರೆ.

ಮೀಸಲಾತಿ ಹಾಗೂ ವಾರ್ಡ್‍ಗಳ ಪರಿಷ್ಕರಣೆಯ ಕಾರಣ ಬಹುಪಾಲು ಸದಸ್ಯರಿಗೆ ಈ ಹಿಂದಿನ ತಮ್ಮ ವಾರ್ಡ್‍ಗಳಲ್ಲಿ ಸ್ಪರ್ಧಿಸುವ ಅವಕಾಶ ಇಲ್ಲದಂತಾಗಿದೆ. ಕೇವಲ ನಾಲ್ಕೈದು ಸದಸ್ಯರು ಮಾತ್ರ ತಮ್ಮ ವಾರ್ಡ್‍ಗಳಲ್ಲಿ ಸ್ಪರ್ಧಿಸುವ ಉಮೇದಿಯೊಂದಿಗೆ ಸಿದ್ಧತೆ ನಡೆಸಿದ್ದಾರೆ.
ನಿರ್ಗಮಿತ ಆಡಳಿತ ಮಂಡಳಿಯಲ್ಲಿ ಒಟ್ಟು 20 ಸದಸ್ಯರಲ್ಲಿ 15 ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸಿದ್ದರೆ ಜೆಡಿಎಸ್ 4 ಹಾಗೂ ಓರ್ವ ಪಕ್ಷೇತರ ಸದಸ್ಯ ಪ್ರತಿಪಕ್ಷದಲ್ಲಿದ್ದರು. ಆದರೆ ಹಲವಾರು ಸಂದರ್ಭಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಎಂಬ ವ್ಯತ್ಯಾಸವಿಲ್ಲದಂತೆ ‘ಹೊಂದಾಣಿಕೆ’ ಕಾಣಸಿಗುತ್ತಿತ್ತು!

ಭ್ರಷ್ಟಾಚಾರದ ಬೇಗುದಿ:- ಬಿನ್‍ಶೇತ್ಕಿ ಹಾಗೂ ನಿವೇಶನಗಳ ಅಭಿವೃದ್ಧಿ, ಮನೆ ಹಂಚಿಕೆ, ವಾಣಿಜ್ಯ ಮಳಿಗೆಗಳ ಹಂಚಿಕೆ ವಿಷಯದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತಲೆ ತಗ್ಗಿಸುವ ಪ್ರಸಂಗವು ಸಹ ಹಲವಾರು ಬಾರಿ ನಡೆಯಿತು.
ಸ್ವತಃ ಆರ್.ವಿ. ದೇಶಪಾಂಡೆಯವರು ತಮ್ಮದೇ ಪಕ್ಷದ ಆಡಳಿತ ಮಂಡಳಿ ಕಾರ್ಯವೈಖರಿಯ ಬಗ್ಗೆ ಹಲವಾರು ಸಲ ಆಂತರಿಕವಾಗಿ ಮಾತ್ರವಲ್ಲದೇ ಬಹಿರಂಗವಾಗಿಯೂ ಸಹ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಪ್ರತಿಪಕ್ಷ ಭಾಜಪ ಮುಖಂಡರಾದ ಮಾಜಿ ಶಾಸಕ ಸುನೀಲ ಹೆಗಡೆಯವರು ಸಹ ಭ್ರಷ್ಟಾಚಾರದ ವಿಷಯವನ್ನು ಎತ್ತಿ ಹಲವಾರು ಬಾರಿ ಪತ್ರಿಕಾ ಹೇಳಿಕೆಗಳನ್ನು ನೀಡುವ ಮೂಲಕ ಆಡಳಿತ ಮಂಡಳಿಯು ಕಸಿವಿಸಿಗೊಳ್ಳುವಂತೆ ಮಾಡುತ್ತಿದ್ದರು.

ಚುನಾವಣೆ ಘೋಷಣೆಯಾಗುವ ಪೂರ್ವದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಸಭೆಯಲ್ಲಿ ಪಾಲ್ಗೊಂಡು ಭ್ರಷ್ಟಾಚಾರದ ಸಂಗತಿ ತಲೆತಗ್ಗಿಸುವಂತೆ ಮಾಡುತ್ತಿದೆ ಎಂದು ತೀರಾ ನೋವಿನಿಂದ ಹೇಳಿದ್ದರು.
ಕೆಲ ಪುರಪಿತೃರು ಪಟ್ಟಣದಲ್ಲಿ ಕಾಮಗಾರಿ ಮಾಡಿರುವ ಗುತ್ತಿಗೆ ಏಜೆನ್ಸಿಯಿಂದ ಪಡೆದ ವಂತಿಗೆ, ಬಿನ್‍ಶೇತ್ಕಿ ನಿವೇಶನ ಅಭಿವೃದ್ಧಿಪಡಿಸುವವರಿಂದ ಪಡೆದ ‘ನಿರಾಪೇಕ್ಷಣಾ ಪಾಲು’, ವಾಣಿಜ್ಯ ಮಳಿಗೆಯೊಂದರ ಬಹಿರಂಗ ಹರಾಜು ಮಾಡುವದಕ್ಕಿಂತ ಮುಂಚೆ ಸ್ವೀಕರಿಸಿದ ‘ಪ್ರಸಾದ’ ಇವುಗಳ ಬಗ್ಗೆ ಪುರಸಭೆ ಕಾರ್ಯಾಲಯದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗುಸು-ಗುಸು ಪಿಸುಮಾತುಗಳು ಮುಂದಿನ ದಿನಗಳಲ್ಲಿ ಬಹಿರಂಗಗೊಂಡಿರುವುದು ಗುಟ್ಟಾಗಿ ಉಳಿದಿಲ್ಲ.

loading...