ಪುರಸಭೆ ಚುನಾವಣೆ ಹಿನ್ನೆಲೆ ಪೂರ್ವಭಾವಿ ಸಭೆ

0
5
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಸ್ಥಳೀಯ ಪ್ರಶ್ನಾತೀತ ಪ್ರಭಾವಿ ಮುಖಂಡರಾದ ಎಸ್.ಎಲ್. ಘೋಟ್ನೇಕರ ಅವರು ಹಾಜರಾಗದೇ ತಮ್ಮ ಮುನಿಸಿನ ಧೋರಣೆಯನ್ನು ಮುಂದುವರಿಸಿದ್ದಾರೆ. ತನ್ಮೂಲಕ ಇಲ್ಲಿನ ಕಾಂಗ್ರೆಸ್ ಪಕ್ಷದೊಳಗಿನ ಬಂಡಾಯದ ಜ್ವಾಲೆಯ ಉರಿ ಹೆಚ್ಚಾಗಿದೆ.
ಬುಧವಾರ ಬೆಳಿಗ್ಗೆ ಖಾಸಗಿ ರೆಸಾರ್ಟ್‍ವೊಂದರಲ್ಲಿ ಪುರಸಭೆ ಚುನಾವಣೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಭೀಮಣ್ಣಾ ನಾಯ್ಕ ಅವರು ಸಭೆಯ ನೇತೃತ್ವ ವಹಿಸಲು ಶಿರಸಿಯಿಂದ ಆಗಮಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೋರ್ವೆಕರ ಅಧ್ಯಕ್ಷತೆಯಲ್ಲಿ ಈ ಸಭೆಯನ್ನು ಏರ್ಪಡಿಸಲಾಗಿತ್ತು. ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಬಯಸುವ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಪಾಲ್ಗೊಂಡಿದ್ದರು. ಆದರೆ ಹಿರಿಯರಾದ ಎಂಎಲ್‍ಸಿ ಘೋಟ್ನೇಕರ ಆಗಲಿ ಅವರ ಬೆಂಬಲಿಗರನೇಕರಾಗಲಿ ಈ ಸಭೆಯಿಂದ ಹೊರಗುಳಿದಿರುವದು ಭಾರಿ ಚರ್ಚೆಗೆ ಕಾರಣವಾಯಿತು.

ಒಟ್ಟು 23 ಸದಸ್ಯರಿರುವ ಹಳಿಯಾಳ ಪುರಸಭೆಯಲ್ಲಿ ಘೋಟ್ನೇಕರ ಅವರು ವಾಸಿಸುತ್ತಿರುವ ವಾರ್ಡ್ ನಂ. 16 ರಲ್ಲಿ ಎಸ್.ಎಲ್. ಘೋಟ್ನೇಕರ ಅವರ ಏಕೈಕ ಸುಪುತ್ರರಾದ ಎಪಿಎಂಸಿ ಅಧ್ಯಕ್ಷರಾಗಿರುವ ಶ್ರೀನಿವಾಸ ಘೋಟ್ನೇಕರ ಅವರನ್ನು ಸ್ಪರ್ಧಾ ಕಣಕ್ಕೆ ಇಳಿಸಲು ಯೋಚಿಸಲಾಗಿತ್ತು. ಆದರೆ ಕಾಂಗ್ರೆಸ್‍ನಲ್ಲಿದ್ದ ಕೆಲವರ ಅಪೇಕ್ಷೆ ಹಾಗೂ ಪ್ರಯತ್ನದಿಂದಾಗಿ ಮೀಸಲಾತಿ ಪರಿಷ್ಕರಣೆಯಾಯಿತು. ತಿಳಿದೋ ಇಲ್ಲವೇ ತಿಳಿಯದೆಯೋ ವಾರ್ಡ್ ನಂ. 16 ಮೀಸಲು ರಹಿತ (ಸಾಮಾನ್ಯ) ದಿಂದ ಬದಲಾಗಿ ಮಹಿಳಾ ಅಭ್ಯರ್ಥಿಗೆ ಮೀಸಲಾಗಿ ಬಿಟ್ಟಿತು. ಪರಿಣಾಮ ಶ್ರೀನಿವಾಸ ರವರು ತಾವು ವಾಸಸ್ಥಾನ ಹೊಂದಿರುವ ವಾರ್ಡ್‍ನಿಂದ ಸ್ಪರ್ಧಿಸುವ ಅವಕಾಶದಿಂದ ವಂಚಿತರಾದರು. ಇದು ಎಂಎಲ್‍ಸಿ ಎಸ್.ಎಲ್. ಘೋಟ್ನೇಕರ ಅವರನ್ನು ಕೆರಳಿಸುವಂತೆ ಮಾಡಿದೆ.
ಮಹತ್ವಪೂರ್ಣವಾಗಿರುವ ಪೂರ್ವಭಾವಿ ಸಭೆ ಆರಂಭಕ್ಕಿಂತ ಮುಂಚೆ ಡಿಸಿಸಿ ಅಧ್ಯಕ್ಷ ಭೀಮಣ್ಣಾ ನಾಯ್ಕ ಅವರು ತಾವು ಖುದ್ದಾಗಿ ತೆರಳಿ ಎಸ್.ಎಲ್. ಘೋಟ್ನೇಕರ ಅವರನ್ನು ಭೇಟಿಯಾಗಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರೂ ಸಹ ಪ್ರಯತ್ನ ಫಲಪ್ರದವಾಗಲಿಲ್ಲ.

ಘೋಟ್ನೇಕರ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುವ ಬಗ್ಗೆ ಪ್ರತಿ ವಾರ್ಡ್‍ಗಳಲ್ಲಿ ಒಮ್ಮತದ ಹಾಗೂ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಜಿಲ್ಲಾಧ್ಯಕ್ಷ ಭೀಮಣ್ಣಾ ನಾಯ್ಕ ಅವರು ಹೇಳಿದರು ಎಂದು ತಿಳಿದು ಬಂದಿದೆ. ಸ್ಪರ್ಧಾ ಆಕಾಂಕ್ಷಿಗಳು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಿಂದ ನಿಗದಿತ ಅರ್ಜಿ ನಮೂನೆಯನ್ನು ನಿಗದಿತ ಶುಲ್ಕ ನೀಡಿ ಪಡೆದು ಭರ್ತಿ ಮಾಡಿ ಪ್ರವೇಶ ಫೀ ಯೊಂದಿಗೆ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ತಲುಪಿಸುವಂತೆ ಸೂಚಿಸಿದರು ಎಂದು ಮಾಹಿತಿ ಲಭ್ಯವಾಗಿದೆ.

loading...