ಪ್ರತ್ಯೇಕ ಉ-ಕ ರಾಜ್ಯ ರಚನೆಗೆ ಆಗ್ರಹಿಸಿ ಕರೆ ಬಂದ್‌ಗೆ ನೀರಸ ಪ್ರತಿಕ್ರಿಯೆ

0
7
loading...

ವಿಜಯಪುರ: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಗೆ ಆಗ್ರಹಿಸಿ ಕರೆ ನೀಡಲಾಗಿದ್ದ ಬಂದ್‌ಗೆ ವಿಜಯಪುರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಜಯಪುರದಲ್ಲಿ ಪ್ರತ್ಯೇಕ ರಾಜ್ಯ ರಚನೆಯ ವಿಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ಅಖಂಡ ಕರ್ನಾಟಕದ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಹೋರಾಟವು ಜನಪರ ಚಳುವಳಿಯಾಗಿರದೇ ರಾಜಕೀಯ ಸ್ವಾರ್ಥಕ್ಕೆ ನಡೆದ ಜನವಿರೋಧಿ ಕೃತ್ಯವಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಏಕೀಕರಣಕ್ಕಾಗಿ ಉತ್ತರ ಕರ್ನಾಟಕದ ಹಲವು ಮಹನೀಯರ ತ್ಯಾಗ ಬಲಿದಾನ ಮತ್ತು ಪರಿಶ್ರಮವಾಗಿದ್ದು, ಪ್ರತ್ಯೇಕ ರಾಜ್ಯದ ಕೂಗು ಕೇವಲ ರಾಜಕೀಯ ಹಿತಾಸಕ್ತಿಯಾಗಿದೆ. ರಾಜಕೀಯ ಲಾಭಕ್ಕಾಗಿ ಕೆಲವೊಂದು ಜನಪ್ರತಿನಿಧಿಗಳೇ ಪ್ರತ್ಯೇಕ ರಾಜ್ಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಳುವ ಸರ್ಕಾರಗಳು ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಮನ ಹರಿಸಬೇಕು, ಕೂಡಲೇ ಎಚ್ಚೆತ್ತುಕೊಂಡು ಉತ್ತರ ಕರ್ನಾಟಕದ ಪ್ರಗತಿಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಉ.ಕ ಸರ್ಕಾರಗಳು ಅನುಸರಿಸುತ್ತಿರುವ ಮಲತಾಯಿ ಧೋರಣೆ ನಿಲ್ಲಿಸಬೇಕು. ಹಲವಾರು ಯೋಜನೆಗಳಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ಎಸಗುವುದು ಸರ್ಕಾರಗಳ ಧೋರಣೆಯಾಗಿದೆ ಎಂದರು.
ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ, ಮಹಾದೇವ ರಾವಜಿ, ಅಶೋಕ ನಾವಿ, ಮಂಜುನಾಥ ಹಿರೇಮಠ, ಭರತ ಕೋಳಿ, ದಸ್ತಗೀರ ಸಾಲೋಟಗಿ, ಯಾಕೂಬ ಕೋಪರ, ವಿನೋದ ದಳವಾಯಿ, ಫಯಾಜ ಕಲಾದಗಿ, ಮೈಬೂಬ ಬೇನೂರ, ರಾಜು ಹಜೇರಿ, ದಯಾನಂದ ಸಾವಳಗಿ ಪಾಲ್ಗೊಂಡಿದ್ದರು.

loading...