ಪ್ರವಾಹದಲ್ಲಿ ಸತ್ತವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

0
4
loading...

ಬೆಂಗಳೂರು:ಪ್ರವಾಹ ಪರಿಸ್ಥಿತಿಯಿಂದ ಕೊಡಗು ಜಿಲ್ಲೆ ಅಕ್ಷರಶಃ ನಲುಗಿದ್ದು,ಪ್ರವಾಹದ ವೇಳೆ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನ ಸರ್ಕಾರ ಘೋಷಿಸಿದೆ.
ಈ ಕುರಿತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಘೋಷಣೆ ಮಾಡಿದ್ದಾರೆ.ಮೃತರ ಕುಟುಂಬಕ್ಕೆ ತಲಾ 5 ಲಕ್ಷ, ಮತ್ತು ಗಾಯಾಳುಗಳಿಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದು ತಿಳಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೊಡಗು ಸೇರಿದಂತೆ ಅತಿವೃಷ್ಟಿ ಪೀಡಿತ ಜಿಲ್ಲೆಗಳ ಪರಿಸ್ಥಿತಿ, ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಕುರಿತು ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಪರಿಹಾರ ಕಾರ್ಯ ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆ ಬಗ್ಗೆ ಚರ್ಚೆ ನಡೆಸಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕಂದಾಯ, ಲೋಕೋಪಯೋಗಿ, ಗೃಹ, ಗ್ರಾಮೀಣ ಅಭಿವೃದ್ಧಿ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಶಿವಮೊಗ್ಗ,ಮೈಸೂರು, ಹಾಸನ ಜಲಾಶಯಗಳು ತುಂಬಿದ್ದು ನೀರನ್ನ ಹೊರ ಬಿಟ್ಟ ಹಿನ್ನೆಲೆ ಅಪಾರ ಪ್ರಮಾಣದ ರೈತರ ಬೆಳೆ ನಾಶವಾಗಿದೆ.ಕಾಫಿ,ಮೆಣಸು ಅಡಿಕೆ ಬೆಳೆ ನಾಶವಾಗಿದ್ದು 3-4ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದೇನೆ.ಕಾಫಿಬೋರ್ಡ್‍ಗೂ ವರದಿ ನೀಡುವಂತೆ ಹೇಳಿದ್ದೇನೆ ಎಂದು ತಿಳಿಸಿದರು.
ಭಾರಿ ಮಳೆಯಿಂದ ಗುಡ್ಡ ಕುಸಿತದಿಂದಾಗಿ ಕೊಡಗಿನಲ್ಲಿ ಅತಿದೊಡ್ಡ ಅನಾಹುತ ಸಂಭವಿಸಿದೆ.ರಕ್ಷಣಾ ಕಾರ್ಯ ಸಮರೋಪಾ ದಿಯಲ್ಲಿ ಸಾಗಿದೆ.ಕೊಡಗು ಜಿಲ್ಲೆಯಲ್ಲಿ 20ಗಂಜಿ ಕೇಂದ್ರಗಳನ್ನ ತೆರೆಯಲಾಗಿದ್ದು,2060 ಜನ ಆಶ್ರಯ ಪಡೆದಿದ್ದಾರೆ.ಸೇನಾಪಡೆ ಜತೆ ಪೊಲೀಸರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನು ಪರಿಹಾರ ಕಾರ್ಯಗಳಿಗೆ ಸ್ಪಂದಿಸಲು ಅಧಿಕಾರಿಗಳ ತಂಡ ರಚಿಸಲಾಗಿದೆ.ಪರಿಹಾರ ಕಾರ್ಯದ ಬಗ್ಗೆ ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಈ ನಡುವೆ ಹವಮಾನ ವೈಪರಿತ್ಯ ಹಿನ್ನೆಲೆ ಸಿಎಂ ವೈಮಾನಿಕ ಸಮೀಕ್ಷೆಯನ್ನು ರದ್ದುಪಡಿಸಿ ಖುದ್ದಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ರಸ್ತೆಯ ಮೂಲಕವೇ ತೆರಳಲು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಮಾನ ವೈಪರಿತ್ಯ ಹೆಲಿಕಾಪ್ಟರ್ ಹಾರಾಟ ಮಾಡಲು ಸಾಧ್ಯವಿಲ್ಲ.ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸಿಎಂಗೆ ತಿಳಿಸಿದರು.ಹೀಗಾಗಿ ವೈಮಾನಿಕ ಸಮೀಕ್ಷೆ ರದ್ದುಗೊಳಿಸಲಾಗಿದೆ. ಬೆಂಗಳೂರಿನಿಂದ ಪಿರಿಯಾಪಟ್ಟಣ ತೆರಳಲಿರುವ ಸಿಎಂ ಅಧಿಕಾರಿಗಳ ಜತೆಗೆ ಸಭೆ ನಡೆಸಲಿದ್ದು ಬಳಿಕ ರಸ್ತೆ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಕರ್ನಾಟಕದ ಮೂವತ್ತು ಜಿಲ್ಲೆಗಳಲ್ಲಿ, ಒಟ್ಟು ಐದು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು,ಅತಿಯಾದ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

loading...