ಬಕ್ರೀದ್ ಹಬ್ಬ;ಸಿದ್ದರಾಮಯ್ಯ ಸೇರಿ ಹಲವರು ಪ್ರಾರ್ಥನೆಯಲ್ಲಿ ಭಾಗಿ

0
7
loading...

ಬೆಂಗಳೂರು: ತ್ಯಾಗ ಬಲಿದಾನದ ಸಂಕೇತ ಬಕ್ರೀದ್ ಹಬ್ಬವನ್ನ ಇಂದು ರಾಜ್ಯಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಿದರು.ಈದ್ಗಾ ಮೈದಾನದ ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ವೇತಾ ವರ್ಣದ ಉಡುಪು ತೊಟ್ಟು ಒಬ್ಬರಿಗೊಬ್ಬರು ಅಪ್ಪಿಕೊಂಡು ಬಕ್ರೀದ್ ಹಬ್ಬದ ಶುಭಾಶಯ ಕೋರುತ್ತಿದ್ದ ದೃಶ್ಯ ಕಂಡು ಬಂತು.
ಬಕ್ರೀದ್ ಹಬ್ಬದ ವಿಶೇಷವೇ ಕುರಿಯನ್ನು ಬಲಿ ನೀಡುವುದು ಹಾಗೂ ಬಡವರಿಗೆ ದಾನ ಮಾಡುವುದು. ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಸಂಕೇತ.ಇದನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಹೆಸರಿನಲ್ಲಿ ಕೂಡ ಮಾಡಲಾಗುತ್ತೆ.ಇನ್ನೂ, ಭಕ್ತಿಯಿಂದ ಅಡುಗೆ ಮಾಡಿ ಪ್ರೀತಿಯಿಂದ ಬಡವರಿಗೆ ಉಣಬಡಿಸುವುದು ಈ ಹಬ್ಬದ ಪದ್ದತಿ.
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗೆ ಜನ ಸಾಗರವೇ ಕಂಡು ಬಂತು.ಬಕ್ರೀದ್ ಹಬ್ಬದ ಪ್ರಾರ್ಥನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ,ಸಚಿವ ಜಮೀರ್ ಅಹ್ಮದ್ ಮತ್ತು ಎಂಎಲ್ ಸಿ ರಿಜ್ವಾನ್ ಭಾಗಿಯಾಗಿದ್ದರು.
ಈದ್ಗಾ ಮೈದಾನದಲ್ಲಿ ಸಕಲ ಸಿದ್ಧತೆ ಹಿನ್ನೆಲೆ ಹೆಚ್ಚುವರಿ ಪೊಲೀಸ್ ಆಯುಕ್ತ ಪಶ್ಚಿಮ ವಿಭಾಗ ಡಿ.ಕೆ ಸಿಂಗ್ ನೇತೃತ್ವದಲ್ಲಿ ಈದ್ಗಾ ಮೈದಾನಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು.ಡಿಸಿಪಿ ರವಿ ಡಿ.ಚನ್ನಣ್ಣನವರ್ ಸೇರಿದಂತೆ 5ಜನ ಇನ್ಸ್‍ಪೆಕ್ಟರ್‍ಗಳು,8ಸಬ್‍ಇನ್ಸ್ ಪೆಕ್ಟರ್, 200 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಇತ್ತ ಆರ್.ಟಿ.ನಗರದ ಮೈದಾನದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು. ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಈದ್ಗಾ ಮೈದಾನದಲ್ಲಿ ನಮಾಝ್ ಮಾಡಿದ ಬಳಿಕ ಮನೆಗೆ ತೆರಳಿ ಹಿರಿಯರ ಆಶೀರ್ವಾದ ಪಡೆಯಲಾಗುತ್ತೆ.
ಬಕ್ರೀದ್ ಹಬ್ಬದ ಸಮಯದಲ್ಲಿ ಹೆಚ್ಚಾಗಿ ಕುರಿಗಳ ಬಲಿಯನ್ನು ಮಾಡಲಾಗುತ್ತೆ.ಆಗ ಹೆಚ್ಚು ತ್ಯಾಜ್ಯಗಳ ಉತ್ಪತ್ತಿ ಆಗೋದು ಮಾಮೂಲಿ. ಆದರೆ ಅವುಗಳ ತೆರವು ಮಾತ್ರ ಬಿಬಿಎಂಪಿಗೆ ತಲೆನೋವಿನ ಸಂಗತಿ.ಹೀಗಾಗಿ ಬಾಪೂಜಿನಗರ ವಾರ್ಡ್ 134ರ ಬಿಬಿಎಂಪಿ ಸದಸ್ಯ ಅಜ್ಮಲ್ ಬೇಗ್ ಹೊಸ ಪ್ರಯತ್ನವೊಂದಕ್ಕೆ ಕೈಹಾಕಿದ್ದು, ತ್ಯಾಜ್ಯ ವಿವೇವಾರಿಗೆ ಈಗಾಗಲೇ ವಾಹನಗಳ ವ್ಯವಸ್ಥೆ ಮಾಡಿದ್ದಾರೆ.
ಉಳಿದಂತೆ ಯಶವಂತಪುರ, ಶಿವಾಜಿನಗರ, ಆರ್ ಟಿ ನಗರ, ಬ್ಯಾಟರಾಯನಪುರ, ಮಡಿವಾಳ, ಕೆ.ಆರ್ ಪುರಂ, ಫ್ರೇಜರ್ ಟೌನ್,ಹೆಚ್‍ಎಸ್‍ಆರ್ ಲೇಔಟ್ ಸೇರಿದಂತೆ ಹಲವೆಡೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಷಯ ಕೋರಿದರು.ಹಬ್ಬದೂಟ ಮಾಡಿ, ನೆರೆಹೊರೆ, ನೆಂಟರಿಗೆ, ಬಡವರಿಗೆ ಹಂಚಿ ಸಂಭ್ರಮಿಸಿದರು.
ಉಳ್ಳವರು ಬಡವರಿಗೆ, ಮಸೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದವರಿಗೆ ದಾನ ಮಾಡುವ ದೃಶ್ಯವೂ ಕಂಡುಬಂತು.ಒಟ್ಟಿನಲ್ಲಿ ಹೊಸ ಬಟ್ಟೆ ಧರಿಸಿ ಬೆಳಗ್ಗೆಯೇ ಬಂದು ಮಂಡಿಯೂರಿ ಪ್ರಾರ್ಥಿಸಿ ಮಾಡಿ, ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು.
ಇನ್ನು ನಾಡಿನ ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಕ್ರೀದ್ ಆಚರಣೆಯ ಶುಭಾಶಯ ಕೋರಿದ್ದಾರೆ.
ತ್ಯಾಗ ಬಲಿದಾನದ ಸಂಕೇತವಾಗಿ ನಡೆಯುವ ಈ ಪವಿತ್ರ ಹಬ್ಬದ ಸಂದರ್ಭದಲ್ಲಿ, ಎಲ್ಲೆಡೆ ಸೌಹಾರ್ದ ವಾತಾವರಣ ನೆಲೆಸಿ, ಸಕಲ ಮಾನವ ಕುಲಕ್ಕೆ ಒಳಿತಾಗಲಿ ಎಂದು ಹಾರೈಕೆ ಮಾಡಿ, ಶುಭ ಸಂದೇಶವನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

loading...