ಬದುಕಿನ ಸಂತಸಕ್ಕೆ ಸಂಪತ್ತು ಬೇಕಿಲ್ಲ: ರಂಭಾಪುರಿ ಶ್ರೀಗಳು

0
5
loading...

ಕನ್ನಡಮ್ಮ ಸುದ್ದಿ ನರೇಗಲ್ಲ: ಮನುಷ್ಯ ಭೌತಿಕವಾಗಿ ಎಷ್ಟೇ ಸಂಪತ್ತು ಗಳಿಸಿದರೂ ಮನಸ್ಸಿಗೆ ಶಾಂತಿಯಿಲ್ಲ. ಅಧಿಕಾರ, ಅಂತಸ್ತು ಹೊಂದಿದ್ದರೂ ನೆಮ್ಮದಿ ಇರುವುದಿಲ್ಲ. ಧರ್ಮದ ಆದರ್ಶ ಮೌಲ್ಯಗಳನ್ನು ಜೀವನದ ಪರಿಪಾಲನೆಯಲ್ಲಿ ತಂದಾಗ ಮಾತ್ರ ಉತ್ಕರ್ಷತೆ ಕಾಣಲು ಸಾಧ್ಯವಾಗುತ್ತದೆ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಈ ಭಾಗದಲ್ಲಿ ನೆಲೆ ನಿಂತು ಮಾನವ ಧರ್ಮದ ಹಿರಿಮೆಯನ್ನು ಬೋಧಿಸಿ ಉದ್ದರಿಸಿದರು. ಅವರ ಸಂದೇಶ ಮಾರ್ಗದರ್ಶನ ಎಂದೆಂದಿಗೂ ಅವಿಸ್ಮರಣೀಯ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸಮೀಪದ ಅಬ್ಬಿಗೇರಿಯ ಹಿರೇಮಠದಲ್ಲಿ ಶುಕ್ರವಾರ ಜರುಗಿದ ಲಿಂ. ವೀರಭದ್ರ ಸ್ವಾಮೀಜಿಗಳ 49ನೇ ಪುಣ್ಯಸ್ಮರಣೆ ಹಾಗೂ ಜನಜಾಗೃತಿ ಧರ್ಮ ಸಭೆ ಮತ್ತು ಜಗದ್ದುರು ರೇಣುಕಾಚಾರ್ಯ ಸಾಂಸ್ಕøತಿಕ ಸಭಾಭವನ, ಅಡುಗೆ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬದುಕಿನಲ್ಲಿ ಐಶ್ಚರ್ಯದ ಜೊತೆಗೆ ಔದಾರ್ಯ-ತ್ಯಾಗ ಇದ್ದಾಗ ಸಮಾಜ ಸಶಕ್ತಗೊಳ್ಳುತ್ತದೆ. ಬದುಕಿನ ಸಂತಸಕ್ಕೆ ಸಂಪತ್ತು ಬೇಕಾಗಿಲ್ಲ. ಹೃದಯ ಶ್ರೀಮಂತಿಕೆ ಇದ್ದರೆ ಬಾಳು ವಿಕಾಸಗೊಳ್ಳುವುದು. ಜಗದ ಜಂಜಡಗಳಿಗೆ ಜಗದ್ಗುರು ರೇಣುಕಾಚಾರ್ಯರ ಸಂದೇಶಗಳು ಪರಿಹಾರದ ದಾರಿ ತೋರುತ್ತವೆ. ಮನುಷ್ಯ-ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಹೂ, ಹಣ್ಣು ನೆರಳು ಕೊಡುವ ಮರಗಳನ್ನು ಬೆಳಸುವ ಗುಣವಿರಬೇಕು ಹೊರತು ವಿನಾಶ ಮಾಡುವುದಲ್ಲ. ವೀರಶೈವ ಧರ್ಮದಲ್ಲಿ ಅತ್ಯಮೂಲ್ಯವಾದ ಜೀವನ ಆದರ್ಶತೆಗಳನ್ನು ನಿರೂಪಿಸಿದ್ದನ್ನು ಯಾರೂ ಮರೆಬಾರದು ಎಂದರು.
ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಲಿಂ. ವೀರಭದ್ರ ಶಿವಾಚಾರ್ಯರ ಪುಣ್ಯಾರಾಧನೆ ನಿಮಿತ್ತ ನಡೆಯುವ ಹತ್ಕಾರ್ಯಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡಿ ಮನಸ್ಸಿಗೆ ಶಾಂತಿ ನೀಡುವ ಮಹಾತ್ಮರ ಪುಣ್ಮಸ್ಮರಣೆ ಕಾರ್ಯಕ್ರಮ ಸದ್ಭಕ್ತರ ಬಾಳಿನಲ್ಲಿ ಬೆಳಕು ಮೂಡಿಸುತ್ತದೆ. ಪ್ರತಿಯೊಬ್ಬರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಪಾವನರಾಗಬೇಕು. ಗುರುವಿನ ಕೃಪೆಯಿಂದ, ಸದ್ಭಕ್ತರ ಸಹಕಾರದಿಂದ ಶ್ರೀಮಠದ ಪ್ರತಿಯೊಂದು ಕಾರ್ಯಗಳು ಸರಾಗವಾಗಿ ನಡೆಯುತ್ತವೆ ಎಂದರು.
ವೀರಭದ್ರ ಸ್ವಾಮೀಜಿ ಮಾತನಾಡಿ, ಲಿಂ. ವೀರಭದ್ರ ಸ್ವಾಮೀಜಿ ಅಬ್ಬಿಗೇರಿ ಹಿರೇಮಠಕ್ಕೆ ಮಾತ್ರ ಸೀಮಿತ ಅಲ್ಲದೆ ಇಡೀ ಉತ್ತರ ಕರ್ನಾಟಕದಲ್ಲಿ ಸಾಂಸ್ಕøತಿಕ ಪಾಠ ಶಾಲೆ ಪ್ರಾರಂಭಗೊಳಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದ ವಟುಗಳಿಗೆ ಸಾಂಸ್ಕøತಿಕ ಶಿಕ್ಷಣ ನೀಡಿದ್ದಾರೆ ಎಂದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಗುರುವಿಲ್ಲದೇ ಅರಿವು ಆಚಾರ ಪ್ರಾಪ್ತವಾಗದು. ಗುರುವಿನ ಮಹಿಮೆ ಎಷ್ಟು ಕೊಂಡಾಡಿದರೂ ಕಡಿಮೆ ಆಗಿದೆ. ವೀರಭದ್ರ ಶಿವಾಚಾರ್ಯರು ಈ ಭಾಗದ ಭಕ್ತರ ಬಾಳಿಗೆ ಧರ್ಮದ ಬೆಳಕು ತುಂಬಿ ಉದ್ಧರಿಸಿದ್ದಾರೆ ಎಂದರು.
ಇದೇ ಸಮಯದ ಶಾಸಕರ ಅನುದಾನದಲ್ಲಿ ಮಠದ ಕಲ್ಯಾಣಕ್ಕಾಗಿ 10 ಲಕ್ಷ ರೂ.ಗಳನ್ನು ಪಾಠ ಶಾಲೆ ಕಟ್ಟಡಕ್ಕೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸೋಮಶೇಖರ ಸ್ವಾಮೀಜಿ, ವಿಮಲರೇಣುಕ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಗುರುಲಿಂಗ ಸ್ವಾಮೀಜಿ, ಮಾಚನೂರ ಮಹಾದೇವಮ್ಮ ಸಮ್ಮುಖ ವಹಿಸಿದ್ದರು. ರೂಪಾ ಅಂಗಡಿ, ಶಕುಂತಲಾ ನಿಡಗುಂದಿ, ಯಲ್ಲಪ್ಪ ಹಿರೇಮನಿ, ಸುರೇಶ ನಾಯ್ಕರ, ಸುರೇಶ ಶಿದ್ನೇಕೊಪ್ಪ, ಶರಣಪ್ಪ ಗುಜಮಾಡಿ, ಕಳಕಪ್ಪ ಬಿಲ್ಲ, ಮುತ್ತಕ್ಕ ನಿಡಗುಂದಿ, ಗೀತಾ ವೆಂಕಣ್ಣವರ, ಮುತ್ತಣ್ಣ ಲಿಂಗನಗೌಡ್ರ, ಸಜ್ಜನ ವಕೀಲ ಇದ್ದರು.

loading...