ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರಾಂಜಲ ಮನಸ್ಸಿನ ಕೊಡುಗೆ ಅವಶ್ಯ

0
5
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ಭಾರತದ ಇತಿಹಾಸದಲ್ಲಿ ಸ್ವತಂತ್ರ ಹಾಗೂ ಸ್ವತಂತ್ರೋತ್ತರ ದಿನಗಳನ್ನು ಪರಾಮರ್ಶೆ ಮಾಡಿಕೊಂಡು ನಾಳಿನ ಭಾರತದ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಸಾಹಿತಿ ಎಂ.ಪ್ರಸನ್ನಕುಮಾರ ನುಡಿದರು.
ಹಾನಗಲ್ಲಿನ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಹಾವೇರಿ ಜಿಲ್ಲಾ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಆಯೋಜಿಸಿದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಂತರಿಕ ಕಚ್ಚಾಟಗಳೇ ನಮ್ಮ ಪರಕೀಯಗೊಳಿಸಿದವು. ಒಗ್ಗಟ್ಟು ಪ್ರದರ್ಶಿಸಿದರೂ ಎರಡು ಶತಕಗಳು ಬೇಕಾಯಿತು. ಆದರೆ ಬಂದ ಸ್ವಾತಂತ್ರ್ಯ ಉಳಿಸಿಕೊಳ್ಳಲು ದೊಡ್ಡ ಹೋರಾಟವನ್ನೇ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟತೆ ಎಂಬುದು ಮನುಷ್ಯನನ್ನು ಮಾತ್ರವಲ್ಲ ದೇಶದ ಇತಿಹಾಸದಲ್ಲೇ ವಿಷಯಕಾರಿಯಾಗುತ್ತಿದೆ. ನಾಳೆಗಾಗಿ ಇಂದು ಚಿಂತನೆ ಬೇಕಾಗಿದೆ. ಬಲಿಷ್ಠ ಭಾರತ ನಿರ್ಮಾಣಕ್ಕೆ ನಮ್ಮ ಪ್ರಾಂಜಲ ಮನಸ್ಸಿನ ಕೊಡುಗೆ ಬೇಕಾಗಿದೆ ಎಂದರು. ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಭಿಮಾನ, ದೇಶಾಭಿಮಾನಗಳನ್ನು ಮೈಗೂಡಿಸಿಕೊಳ್ಳಲಾಗದಭಾರತೀಯರಿಂದ ಸ್ವಾತಂತ್ರ್ಯ ಉಳಿಯಲು ಸಾಧ್ಯವಾಗುವುದಿಲ್ಲ. ಸ್ವಾರ್ಥ ಸಂಕುಚಿತತೆಯೇ ಈಗಿನ ಬಯಕೆಗಳಾಗಿದ್ದು, ತ್ಯಾಗ ಬಲಿದಾನದಿಂದ ಬಂದ ಭಾರತದ ಸ್ವಾತಂತ್ರ್ಯ ಮತ್ತೆ ಮಂಕಾಗಿ ಪರಕೀಯ ಆಳ್ವಿಕೆಯನ್ನು ಆಹ್ವಾನಿಸುವಂತಿದೆ. ನಮ್ಮೊಳಗಿನ ಭಾರತೀಯತೆ ದೇಶಭಕ್ತಿ ಜಾಗೃತಗೊಳ್ಳದ ಹೊರತು ನಾವು ಆತಂಕದಲ್ಲೆ ಬದುಕುವ ಸ್ಥಿತಿ ಇದೆ ಎಂದ ಅವರು, ಈಗ ಮಕ್ಕಳನ್ನು ಭವಿಷ್ಯದ ಭಾರತ ನಿರ್ಮಾಣಕ್ಕೆ ದೇಶ ಭಕ್ತರನ್ನಾಗಿ ರೂಪಿಸುವ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು. ಸಾಹಿತ್ಯದ ಅಭಿರುಚಿ ಬೆಳೆಸಬೇಕು ಎಂದರು.
ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾಧ್ಯಕ್ಷ ಸಂತೋಷ ಬಿದರಗಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೋಜರಾಜ ಕರೂದಿ, ಜಿಲ್ಲಾ ಕಾರ್ಯದರ್ಶಿ ದಾವಲ್‍ಮಲಿಕ್ ಇಂಗಳಗಿ, ತಾಲೂಕು ಘಟಕದ ಅಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ, ಲಲಿತಾ ಪರಾಂಡೆ, ದಮಯಂತಿ ದೇಶಪಾಂಡೆ, ಸೃಷ್ಟಿ ಕಲಾಲ ಮುಖ್ಯ ಅತಿಥಿಗಳಾಗಿದ್ದರು. ದೇಶಭಕ್ತಿ ಗೀತೆ : 72 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಸ್ಪೂರ್ತಿ ದೇಸಾಯಿ (ಪ್ರಥಮ), ಅನುಶ್ರೀ (ದ್ವಿತೀಯ), ಪ್ರೀತೀಕ್ಷಾ ಹಾಗೂ ಮಹ್ಮದ ಜುನೇದ (ತೃತೀಯ) ಬಹುಮಾನ ಪಡೆದರು. ಸೃಷ್ಟಿ ಕಲಾಲ, ಮೇಘನಾ, ಜುವೇದ, ಸಾಯಿಪ್ರಸಾದ, ಶ್ರೇಯಾ, ಪ್ರಣತಿ, ಸ್ಪೂರ್ತಿ ದೇಸಾಯಿ, ಬನಶ್ರೀ ರಿತ್ತಿ, ಮನೋಜಗೌಡ ಪ್ರತೀಕ್ಷಾ ಕೋಮಾರ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಸಂತೋಷ ದೊಡ್ಡಮನಿ ಸ್ವಾಗತಿಸಿದರು. ಉಪಾಧ್ಯಕ್ಷ ಮಾರುತಿ ಕೊರಗರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

loading...