ಬಿಜೆಪಿ ಪಕ್ಷದವತಿಯಿಂದ ಭಾರತರತ್ನ ಅಟಲ್‍ಗೆ ಶ್ರದ್ಧಾಂಜಲಿ

0
24
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಮಾಜಿ ಪ್ರಧಾನಮಂತ್ರಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಲು ಭಾರತೀಯ ಜನತಾಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಭೆಯು ಶುಕ್ರವಾರ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಜರುಗಿತು.
ಪಕ್ಷದ ತಾಲೂಕಾ ಉಸ್ತುವಾರಿ ಪ್ರಮೋದ ಹೆಗಡೆಯವರು ಆಗಮಿಸಿ ವಾಜಪೇಯಿ ಅವರ ವಿಶೇಷ ಗುಣಸ್ವಭಾವಗಳು, ಕಾರ್ಯದಕ್ಷತೆ, ಅಜಾತಶತ್ರುವಾಗಿರುವ ಬಗ್ಗೆ ಮಾತನಾಡಿದರು. ಸರ್ವ ಜನಪ್ರೀಯ ವ್ಯಕ್ತಿತ್ವದ ವ್ಯಕ್ತಿಯಾಗಿದ್ದ ಅಟಲ್ ಬಿಹಾರಿ ಯವರು ಕವಿಯಾಗಿ, ಅಪ್ರತಿಮ ವಾಗ್ಮಿಯಾಗಿ, ಅದ್ವಿತೀಯ ಸಂಸತ್ ಪಟುವಾಗಿ, ನಿಷ್ಕಳಂಕ ಚಾರಿತ್ರ್ಯ ಹೊಂದಿದ ರಾಷ್ಟ್ರದ ಮಹಾನ್ ಚೇತನರಾಗಿದ್ದಾರೆ ಎಂದು ಗುಣಗಾನ ಮಾಡಿದರು. ದಿವಂಗತರು ಪ್ರಧಾನಿಯಾಗಿದ್ದಾಗ ದೇಶದ ಪ್ರಗತಿಗೆ ಹಮ್ಮಿಕೊಂಡ ಹಲವಾರು ಯೋಜನೆಗಳು, ಅನೇಕ ನಿರ್ಧಾರಗಳು ಇವುಗಳ ಕಾರಣ ಭಾರತವು ಇಂದು ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸುವಂತಾಯಿತು ಎಂದರು ಪ್ರಮೋದ ಹೆಗಡೆ.

ಪಕ್ಷದ ಅಧ್ಯಕ್ಷ ಶಿವಾಜಿ ನರಸಾನಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಮಾಜಿ ಶಾಸಕ ಹಾಗೂ ಪಕ್ಷದ ಮುಖಂಡ ಸುನೀಲ ಹೆಗಡೆ ಮಾತನಾಡುತ್ತಾ ಅಜಾತಶತ್ರು ಎನಿಸಿಕೊಂಡ ವಾಜಪೇಯಿ ಅವರು ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಪ್ರೇರಣಾದಾಯಿಯಾಗಿದ್ದರು. ಅವರ ಆದರ್ಶದ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರ ವಿಚಾರಗಳನ್ನು ಅನುಷ್ಠಾನಗೊಳಿಸುವದೇ ದಿವಂಗತರಿಗೆ ನಾವು ಕೊಡಬೇಕಾದ ಗೌರವವಾಗಿದೆ ಎಂದರು.
ಪಕ್ಷದ ಮುಖಂಡರಾದ ಮಂಗೇಶ ದೇಶಪಾಂಡೆ, ಶ್ರೀಕಾಂತ ಹೂಲಿ, ಸಂಘ ಪರಿವಾರದ ಸುಭಾಸ ಪೇಂಟರ್ ಇವರುಗಳು ತಮ್ಮ ಮಾತುಗಳಲ್ಲಿ ದಿ. ವಾಜಪೇಯಿ ಅವರ ಗುಣ-ಕಾರ್ಯಗಳ ಸ್ಮರಣೆ ಮಾಡಿದರು.

ಪಕ್ಷದ ಪ್ರಮುಖರಾದ ಎಸ್.ಎ. ಶೆಟವಣ್ಣವರ, ಗಣಪತಿ ಕರಂಜೇಕರ, ವಿ.ಎಂ. ಪಾಟೀಲ, ಅನಿಲ ಮುತ್ನಾಳೆ, ಶಿವಾಜಿ ಪಾಟೀಲ, ಜಯಲಕ್ಷ್ಮೀ ಚವ್ಹಾಣ, ಮೋಹನ ಬೆಳಗಾಂವಕರ, ಉಮೇಶ ದೇಶಪಾಂಡೆ, ಶಾಂತಾ ಹಿರೇಕರ, ನೀತಾ ಭಂಡಗಿ, ಲಿಂಗರಾಜ ಹಿರೇಮಠ, ಸಂತಾನ ಸಾವಂತ, ವಾಸುದೇವ ಪೂಜಾರಿ, ಸಂತೋಷ ಘಟಕಾಂಬ್ಳೆ, ಜೆಡಿಎಸ್ ತಾಲೂಕಾ ಉಪಾಧ್ಯಕ್ಷ ನಸ್ರುಲ್ಲಾ ಖಾನ್ ಮೊದಲಾದವರು ಪಾಲ್ಗೊಂಡಿದ್ದರು.
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿಯೂ ಸಹ ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದಿವಂಗತರ ಸ್ಮರಣೆ ಮಾಡಲಾಯಿತು. ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಚೇರಮನ್ ಮಾಧವಿ ಬೆಳಗಾಂವಕರ, ಮಾಲಾ ಬೃಗಾಂಜಾ, ಸತ್ಯಜೀತ ಗಿರಿ, ಉಮೇಶ ಬೋಳಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

ಕಿತ್ತೂರ ಪ್ಲಾಝಾದಲ್ಲಿಯೂ ಸಹ ವಾಜಪೇಯಿ ಅಭಿಮಾನಿಗಳು ಅಗಲಿದ ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಹೆಸ್ಕಾಂ ಅಧಿಕಾರಿ ರಾಮಕೃಷ್ಣ ಗುನಗಾ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಆನಂದ ವಡ್ಡರ್, ಮುಜಫರ ಶೇಖ, ಮಂಜುನಾಥ ಕೂಡಳ್ಳಿ, ಪರಶುರಾಮ ಕೆ.ಕೆ., ಸುನೀಲ ಲೋಕರೆ, ಸಚಿನ ಅಗಸರ, ಮಂಜು ಫ್ಲೆಕ್ಸ್ ಮೊದಲಾದವರು ಪಾಲ್ಗೊಂಡಿದ್ದರು.
ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಯೂ ಸಹ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿಆರ್‍ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಅವರು ಭಾರತರತ್ನ ದಿ. ವಾಜಪೇಯಿ ಅವರಿಗೆ ನುಡಿನಮನ ಸಲ್ಲಿಸಿದರು.

loading...