ಬಿಡಾಡಿ ದನಗಳಿಗೆ ರಿಪ್ಲೆಕ್ಟರ್ ಅಳವಡಿಕೆ

0
12
loading...

ಕನ್ನಡಮ್ಮ ಸುದ್ದಿ-ಶಿರಸಿ: ಇತ್ತೀಚೆಗೆ ನಗರದಲ್ಲಿ ಬಿಡಾಡಿ ದನಗಳ ಕಾರಣದಿಂದ ಅಪಘಾತಗಳು ಸಂಭವಿಸುತ್ತಿದ್ದು ಜಾನುವಾರುಗಳಿಗೂ ಜೀವಹಾನಿ ಅಷ್ಟೇ ಅಲ್ಲದೇ ವಾಹನ ಸವಾರರಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ತಡೆಗಟ್ಟಲು ಶಿರಸಿ ಯುವಾ ಬ್ರಿಗೇಡ್ ಕಾರ್ಯಕರ್ತರು ಮುಂದಾಗಿದ್ದು, ಬೀದಿಯಲ್ಲಿ ಕಾಣಸಿಗುವ ಅನಾಥ ಗೋವುಗಳ ಕೊರಳಿಗೆ ರಿಫ್ಲೆಕ್ಟರ್ ಅಳವಡಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.
ಹಗಲು ಹೊತ್ತಿನಲ್ಲಿ ಮನೆಮನೆ ತಿರುಗಿ ಅಲ್ಲಿ ಕೊಟ್ಟ ಆಹಾರಗಳನ್ನು ತಿಂದುಕೊಂಡು ಸಂಚರಿಸುವ ಯಾರೂ ದಿಕ್ಕಿಲ್ಲದ ಅನಾಥ ಗೋವುಗಳು, ಸಂಜೆಯ ಮೇಲೆ ರಸ್ತೆ ಬದಿಗಳಲ್ಲಿ ಅಥವಾ ಪ್ರಮುಖ ವೃತ್ತಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದೆ. ಈ ರೀತಿ ಇರುವ ಗೋವುಗಳು ವಾಹನ ಚಾಲಕರಿಗೆ ಗುರುತಿಸುವುದಕ್ಕೆ ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತವೆ. ಜಾನುವಾರುಗಳ ಇರುವಿಕೆ ತಕ್ಷಣ ತಿಳಿಯಲು ಅನುಕೂಲವಾಗುವಂತೆ ಯುವಾ ಬ್ರಿಗೇಡ್ ಕಾರ್ಯಕರ್ತರು ಬೀದಿಯಲ್ಲಿ ಕಾಣಸಿಗುವ ಅನಾಥ ಗೋವುಗಳ ಕೊರಳಿಗೆ ರಿಫ್ಲೆಕ್ಟರ್ ಅಳವಡಿಸುತ್ತಿದ್ದಾರೆ. ಬೀದಿಯಲ್ಲಿರುವ ಅನಾಥ ಗೋವುಗಳಿಗೆ ಇಂತಹ ಪಟ್ಟಿಗಳನ್ನು ಅಳವಡಿಸಿದಾಗ ರಾತ್ರಿ ಸಮಯದಲ್ಲಿ ವಾಹನಗಳ ಬೆಳಕು ಆ ಪಟ್ಟಿಯ ಮೇಲೆ ಬಿದ್ದಾಗ ಅದು ಹೊಳೆಯುತ್ತದೆ ಆ ಮೂಲಕ ಅಲ್ಲಿರುವ ಗೋವುಗಳು ವಾಹನ ಸವಾರರಿಗೆ ದೂರದಿಂದಲೇ ಗೋಚರಿಸುತ್ತದೆ, ಇದರಿಂದ ಅಪಘಾತಗಳು ತಪ್ಪುತ್ತವೆ ಎಂಬುದು ಯುವಾ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಅನಾಥ ಗೋವುಗಳು ವಿಶ್ರಾಂತಿ ಪಡೆಯುವ ಸ್ಥಳಗಳನ್ನು ಗುರುತಿಸಿದ ಶಿರಸಿ ಯುವಾ ಬ್ರಿಗೇಡ್ ಕಾರ್ಯಕರ್ತರು, ಅದೆ ಸಮಯದಲ್ಲಿ ಅಳವಡಿಸಲು ಉದ್ದೇಶಿಸಿರುವ ರೇಡಿಯಮ್ ರೀತಿಯ ರಿಫ್ಲೆಕ್ಟರ್ ಕೊರಳು ಪಟ್ಟಿಗನ್ನು ಸ್ವಂತ ಖರ್ಚಿನಲ್ಲಿ ತಯಾರಿಸಿ ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಕೇವಲ ಪ್ರಾರಂಭವಷ್ಟೇ ಆಗಿದ್ದು, ಇನ್ನು ನಿರಂತರವಾಗಿ ಶಿರಸಿ ನಗರದ ಎಲ್ಲೆಡೆ ಇರುವ ಇಂತಹ ಅನಾಥ ಗೋವುಗಳನ್ನು ಗುರುತಿಸಿ ಅವುಗಳಿಗೆ ರಿಫ್ಲೆಕ್ಟರ್ ಕೊರಳು ಪಟ್ಟಿಗಳನ್ನು ಅಳವಡಿಸುವ ಬೃಹತ್ ಯೋಜನೆ ಹೊಂದಲಾಗಿದೆ. ಈ ಉತ್ತಮ ಕಾರ್ಯದಲ್ಲಿ ಶಿರಸಿಯ ನಾಗರಿಕರು ಬ್ರಿಗೇಡ್ ಕಾರ್ಯಕರ್ತರಿಗೆ ಸಹಕರಿಬೇಕೆಂದು ಯುವಾ ಬ್ರಿಗೇಡ್ ಶಿರಸಿ ಕೋರಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ಈ ಕಾರ್ಯದಲ್ಲಿ ಜತೆಗೂಡಲು ಹರೀಶ್ ಧೂಳಳ್ಳಿ (9482557153) ಅವರನ್ನು ಸಂಪರ್ಕಿಸಬಹುದಾಗಿದೆ.

loading...