ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್ ಬಳಸಿ: ಇಳುವರಿ ದಾಖಲೆ ಪಡೆಯಿರಿ

0
17
loading...

ಮಲ್ಲಯ್ಯ ಗುಂಡಗೋಪುರಮಠ
ನರೇಗಲ್ಲ: ವಸತಿ ಯೋಜನೆ, ಅಭಿವೃದ್ಧಿ ಕಾಮಗಾರಿ ಸೇರಿದಂತೆ ನಾನಾ ಹಂತದಲ್ಲಿ ಪ್ರಗತಿ ದಾಖಲಿಸಲು ಬಳಕೆಯಾಗುತ್ತಿರುವ ಮೊಬೈಲ್ ಆ್ಯಪ್ ಈಗ ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಬೆಳೆ ಸಮೀಕ್ಷೆ ನಡೆಸಲು ಮೊಬೈಲ್ ಆ್ಯಪ್ ಬಳಸಲಾಗುತ್ತಿದೆ.
ರಾಜ್ಯವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಆ್ಯಪ್ ಬಳಸಿ ಸಮೀಕ್ಷೆ ನಡೆಸುತ್ತಿದ್ದು, ಜಮೀನುಗಳಲ್ಲಿಯೇ ಸಚಿತ್ರ ವರದಿ ದಾಖಲಿಸಲಾಗುತ್ತಿದೆ. ಗ್ರಾಮ ಪಂಚಾಯತಿ, ಹೋಬಳಿ ಮಟ್ಟದ ನಿಗದಿತ ಪ್ರದೇಶದಲ್ಲಿ ಸರಾಸರಿ ಬೆಳೆ ಸಮೀಕ್ಷೆ ನಡೆಸಿ, ಬೆಳೆಗಳ ಇಳುವರಿ ಹಾಗೂ ಕಟಾವು ಅಂದಾಜು ಮಾಡಲು ನಿರ್ಧರಿಸಲಾಗಿದೆ. ಬೆಳೆ ಸ್ಥಿತಿ ದಾಖಲಿಸುವುದರಿಂದ ಇಳುವರಿ ಅಂದಾಜಿಸಲು ಅನುಕೂಲವಾಗಲಿದ್ದು, ವಿಮೆ ಪರಿಹಾರ ಮೊತ್ತ ನಿರ್ಧರಿಸಲು ನೆರವಾಗುತ್ತದೆ.
ಸ್ಥಿತಿಗತಿ ದಾಖಲು: ಅಧಿಕಾರಿಗಳು ಸರ್ಕಾರಿ ವೆಬ್‍ಸೈಟ್‍ನಲ್ಲಿ ಈ ಆ್ಯಪ್ ಡೌನ್ ಮಾಡಿಕೊಳ್ಳಬಹುದು. ಸಂರಕ್ಷಣೆ ತಂತ್ರಾಂಶದ ಭಾಗವಾಗಿ ಮೊಬೈಲ್ ಆ್ಯಪ್‍ನ್ನು ಸಿದ್ದ ಪಡಿಸಲಾಗಿದೆ. ಜಿಪಿಎಸ್ ಆಧರಿತವಾಗಿ ಉದ್ದ, ಅಗಲ, ಬೆಳೆ, ರೈತನ ಹೆಸರು, ಬೆಳೆಯ ಸ್ಥಿತಿಯನ್ನು ಇದರಲ್ಲಿ ನಮೂದಿಸಲಾಗುತ್ತದೆ. ಆಯಾ ಬೆಳೆ ಫೋಟೋ, ವಿಡಿಯೋ ಸೇರಿದಂತೆ ರೈತನ ಎಲ್ಲ ವಿವರಗಳನ್ನು ದಾಖಲಿಸಲಾಗುತ್ತಿದೆ. ಎಲ್ಲ ಅಧಿಕಾರಿಗಳು ಈಗಾಗಲೇ ಮೊಬೈಲ್ ಆ್ಯಪ್ ನೀಡಲಾಗಿದೆ. ನಿಖರ ಇಳುವರಿ: ಈ ಹೊಸ ಪ್ರಯೋಗದಿಂದ ಇಳುವರಿ ಗುರುತಿಸಲು ಅನುಕೂಲವಾಗುತ್ತದೆ. ಬೆಳೆ ಕಟಾವಿಗಾಗಿ ಆಯ್ಕೆ ಮಾಡಿಕೊಂಡ ಹಳ್ಳಿಗಳ ಹೊಲದ ಎರಡು ಸರ್ವೆ ನಂಬರ್‍ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಬೆಳೆ ವಿಮೆ ಉದ್ದೇಶಕ್ಕಾಗಿ ಒಂದು ಹೋಬಳಿಯಲ್ಲಿ 10 ಬೆಳೆಗಳ ಕಟಾವು, ಒಂದು ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಧಾನವಾದ 4 ಬೆಳೆಗಳ ಕಟಾವು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಗ್ರಾ.ಪಂ ಮಟ್ಟದಲ್ಲಿ ಹೆಸರು ಬೆಳೆ ಸೇರಿ ಒಟ್ಟು 8ಬೆಳೆಗಳ ಕಟಾವು ಪ್ರಯೋಗ ನಡೆಯುತ್ತದೆ. ಕಟಾವಿನ ಹಂತದಲ್ಲಿ ಈ ಎಲ್ಲ ಮಾಹಿತಿ ಸಿಗುವುದರಿಂದ ಆ್ಯಪ್ ಆಧರಿಸಿ ಇಳುವರಿಯನ್ನು ಅಧಿಕಾರಿಗಳು ಲೆಕ್ಕ ಹಾಕಲು ಅನುಕೂಲವಾಗಲಿದೆ.
ತಪ್ಪಾಗದ ಲೆಕ್ಕಾಚಾರ: ಗ್ರಾಮ, ಜಮೀನು ಗುರುತಿಸಿ ಫೋಟೋ, ವಿಡಿಯೋಗಳನ್ನು ಜಿಪಿಎಸ್ ಕೋ ಆರ್ಡಿನೇಟ್‍ನೊಂದಿಗೆ ದಾಖಲಿಸಿ ಆಪ್‍ಲೋಡ್ ಮಾಡಲಾಗುತ್ತಿದೆ. ಆಯ್ದ ಸರ್ವೆ ನಂಬರ್‍ನಲ್ಲಿ ಬೆಳೆ ಕಟಾವು ಪ್ರಯೋಗವನ್ನು ನಡೆಸಲಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಲಾಗುತ್ತಿದೆ. ಬೆಳೆ ಉತ್ಪನ್ನ ಒಣಗುವಿಕೆಯನ್ನು ಪರಿಗಣಿಸಿ ಕೊನೆಯ ಇಳುವರಿಯನ್ನು ಗಣಕೀಕರಣದಿಂದ ಲೆಕ್ಕ ಹಾಕುವುದರ ಜತೆಗೆ ಅದನ್ನು ಪ್ರತಿ ಹೆಕ್ಟೇರ್‍ಗೆ ಪರಿವರ್ತಿಸುವ ಅವಕಾಶವನ್ನು ಒದಗಿಸಿದ್ದು, ಇದರಿಂದ ಲೆಕ್ಕಾಚಾರ ತಪ್ಪುವ ಸಾಧ್ಯತೆ ಇರುವುದಿಲ್ಲ ಎಂದು ಕಂದಾಯ ಅಧಿಕಾರಿಗಳು ಹೇಳುತ್ತಾರೆ.
ಹಿಂದೆ ಹೀಗಿತ್ತು: ಕಂದಾಯ ಹಾಗೂ ಕೃಷಿ ಇಲಾಖೆಗಳ ಈ ಹಿಂದೆ ಜಂಟಿ ಸಮೀಕ್ಷೆ ಕೈಗೊಳ್ಳತ್ತಿದ್ದವು. ಈಗ ಸಮೀಕ್ಷಾ ವರದಿ ಸಂಬಂಧಿಸಿದ ಇಲಾಖೆಗೆ ತಲುಪಲು ಐದಾರು ತಿಂಗಳ ಬೇಕಾಗಿತ್ತು. ರೈತರಿಗೆ ವಿಮೆ ಅಥವಾ ಬೆಳೆ ನಷ್ಟ ಪರಿಹಾರ ನೀಡಲು ಕಾಯಬೇಕಿತ್ತು. ಈಗ ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ಕೈಗೊಂಡರೆ, ಕ್ಷಣಾರ್ಧದಲ್ಲಿ ಎಲ್ಲ ವಿಭಾಗಗಳಿಗೆ ಮಾಹಿತಿ ರವಾನೆಯಾಗುತ್ತಿದೆ. ಹೀಗಾಗಿ ಬೆಳೆ ಸಮೀಕ್ಷೆಯ ನಿಖರತೆ ಪ್ರಮಾಣ ಹೆಚ್ಚಿಸಲು ಈ ಹೊಸ ಮೊಬೈಲ್ ಆ್ಯಪ್ ಹೆಚ್ಚು ಪರಿಣಾಮಕಾರಿಯಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ನಿಖರ ವರದಿ ನೀಡಲು ಶ್ರಮಿಸಬೇಕಿದೆ.
ಮೊಬೈಲ್ ಆ್ಯಪ್ ಮೂಲಕ ಬೆಳೆಗಳ ಸಮೀಕ್ಷೆ ಕೈಗೊಂಡ ಕ್ಷಣಾರ್ಧದಲ್ಲಿ ಎಲ್ಲ ಹಂತಗಳಿಗೆ ವಿಷಯ ರವಾನೆಯಾಗುತ್ತದೆ. ಎರಡು ಹಂತದಲ್ಲಿ ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ. ಸಮೀಕ್ಷೆಯಲ್ಲಿ ಬೆಳೆಗಳ ಇಳುವರಿ ಶೇ.25 ರಷ್ಟು ಏರಿಕೆಯಾದರೆ ಅಥವಾ ಇಳಿಕೆಯಾದರೆ, ಜಿಲ್ಲಾಧಿಕಾರಿಗಳಿಗೆ ಸಂದೇಶ ರವಾನೆಯಾಗುತ್ತದೆ.
ಕಳಕಪ್ಪ ಕುಷ್ಟಗಿ, ಗ್ರಾಮಲೇಕ್ಕಾಧಿಕಾರಿ.
ರೈತರ ಜಮೀನುಗಳಲ್ಲಿ ಬೆಳೆ ಇರುವಾಗಲೆ ಈ ಸಮೀಕ್ಷೆ ನಡೆಯುವುದರಿಂದ ಅನುಕೂಲವಾಗುತ್ತಿದೆ. ಆದರೆ ಇಂಥದ್ದೊಂದು ಹೊಸ ಪ್ರಯೋಗ ಮಾಡುವುದರಿಂದ, ರೈತರಿಗೆ ಬೆಳೆ ವಿಮೆ ಸಕಾಲದಲ್ಲಿ ಬಂದರೆ ಉತ್ತಮ ಪ್ರಯೋಗವಾಗಲಿದೆ.
ಯಲ್ಲಪ್ಪ ಕಡೆತೋಟದ. ರೈತ

loading...