ಭೀಕರ ಕಾರು ಅಪಘಾತ; ನಟ ಎನ್‍ಟಿಆರ್ ಪುತ್ರ ತೆಲುಗು ನಟ ನಂದಮುರಿ ಹರಿಕೃಷ್ಣ ಸಾವು

0
27
loading...

ಬೆಂಗಳೂರು:ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ನಟ ಎನ್‍ಟಿಆರ್ ಅವರ ಪುತ್ರ, ಮಾಜಿ ಎಂಪಿ ಹಾಗೂ ನಟ ನಂದಮುರಿ ಹರಿಕೃಷ್ಣ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ನಲಗುಂಡ ಬಳಿಯ ರಸ್ತೆಯಲ್ಲಿ ಹರಿಕೃಷ್ಣ ಹಾಗೂ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದಾಗ ಕಾರು ಮುಗುಚಿಬಿದ್ದ ಪರಿಣಾಮ
ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಹರಿಕೃಷ್ಣ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ನಾರ್ಕಟ್ ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.
ನಲ್ಗೊಂಡ ಜಿಲ್ಲೆ ಅನ್ನೇಪರ್ತಿ ಬಳಿ ಮುಂಜಾನೆ 4.30ರಲ್ಲಿ ಈ ಅಪಘಾತ ಸಂಭವಿಸಿದೆ.ಅತಿವೇಗದಲ್ಲಿ ಚಲಿಸುತ್ತಿದ್ದ ಕಾರು ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ.
ಟಿಡಿಪಿ ನಾಯಕ ಹರಿಕೃಷ್ಣ 150 ಕಿ.ಮೀ.ವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದರು.ಅಪಘಾತದ ರಭಸಕ್ಕೆ ಅವರ ಎದೆಗೆ ಕಾರಿನ ಸ್ಟೀರಿಂಗ್ ಬಲವಾಗಿ ಬಡಿದಿದ್ದು, ತಲೆಗೆ ತೀವ್ರ ಗಾಯವಾಗಿ ವಿಪರೀತ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ. ಅವರನ್ನು ಉಳಿಸಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಲ್ಲೂರಿನ ಕಾವಲಿಯಲ್ಲಿ ಆಪ್ತ ಸ್ನೇಹಿತ ಅಭಿಮಾನಿ ಮೋಹನ್ ಅವರ ಪುತ್ರನ ವಿವಾಹದಲ್ಲಿ ಭಾಗವಹಿಸಲು ಅವರು ಹೈದರಾಬಾದ್‍ನಿಂದ ತೆರಳುತ್ತಿದ್ದರು.
ನಲ್ಗೊಂಡ ಜಿಲ್ಲೆಯ ನಾರ್ಕೆಟ್‍ಪಲ್ಲಿ-ಅದ್ದಂಕಿ ಹೆದ್ದಾರಿಯಲ್ಲಿ ಮುಂಜಾನೆ 4.30ರಲ್ಲಿ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಆಗಮಿಸಿದ್ದರು.
ಈ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಇತರ ನಾಲ್ವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ. ಹರಿಕೃಷ್ಣ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಅವರ ಪುತ್ರರಾದ ಖ್ಯಾತ ನಟ ಜ್ಯೂನಿಯರ್ ಎನ್‍ಟಿಆರ್ ಮತ್ತು ಕಲ್ಯಾಣ್ ರಾವ್, ಪುತ್ರಿ ಸುಹಾಸಿನಿ ಹಾಗೂ ಕುಟುಂಬದ ಇತರ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಮರಾವತಿಯಿಂದ ಘಟನಾ ಸ್ಥಳಕ್ಕೆ ಆಗಮಿಸಿದರು.
ಭೀಕರ ಅಪಘಾತದಲ್ಲಿ ನಂದಮೂರಿ ಹರಿಕೃಷ್ಣ ಅಪಘಾತಕ್ಕೀಡಾದ ಸುದ್ದಿ ಬೆಳ್ಳಂಬೆಳಗ್ಗೆಯೇ ಆಂಧ್ರ ಪ್ರದೇಶಕ್ಕೆ ಸಿಡಿಲು ಬಡಿ ದಂತಾಗಿದ್ದು,ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ವಿವಿಧ ಪಕ್ಷಗಳ ಮುಖಂಡರು, ಚಿತ್ರೋದ್ಯಮದ ಖ್ಯಾತನಾಮರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇನ್ನು ಎನ್‍ಟಿಆರ್ ಕುಟುಂಬಕ್ಕೆ ನಾರ್ಕೆರ್ಟ್‍ಪಲ್ಲಿ-ಅದ್ಧಂಕಿ ಹೆದ್ದಾರಿ ಮೈತ್ಯುಕೂಪವಾಗಿ ಪರಿಣಿಮಿಸಿರುವುದು ದುರಂತ.ಇಂದು ಮುಂಜಾನೆ ನಂದಮೂರಿ ಹರಿಕೃಷ್ಣ ಬಲಿಯಾದ ಹೆದ್ದಾರಿ ಸಮೀಪವೇ ಅವರ ಪುತ್ರ ಜಾನಕಿ ರಾಮ್ ಭೀಕರ ರಸ್ತೆ ಅಪಘಾತ ದಲ್ಲಿ ಮೃತಪಟ್ಟಿದ್ದರು.ಡಿಸೆಂಬರ್ 6,2014ರಲ್ಲಿ ಜಾನಕಿ ರಾಮ್ ಅವರನ್ನು ಇದೇ ಹೆದ್ದಾರಿ ಆಪೋಶನ ತೆಗೆದುಕೊಂಡಿತ್ತು. ಪುತ್ರನ ರೀತಿಯಲ್ಲೇ ಹರಿಕೃಷ್ಣ ದುರ್ಮರಣಕ್ಕೀಡಾಗಿದ್ದಾರೆ.
ಹರಿಕೃಷ್ಣ ಮತ್ತೊಬ್ಬ ಪುತ್ರ ಮತ್ತು ಖ್ಯಾತ ನಟ ಜ್ಯೂನಿಯರ್ ಎನ್‍ಟಿಆರ್ ಅವರಿದ್ದ ವಾಹನ ಸಹ ನಾರ್ಕೆರ್ಟ್‍ಪಲ್ಲಿ-ಅದ್ಧಂಕಿ ಹೆದ್ದಾರಿಯಲ್ಲಿ ಭೀಕರ ಅಪಘಾತಕ್ಕೀಡಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಎನ್‍ಟಿಆರ್ ಕುಟುಂಬ ಇತರ ಸದಸ್ಯರ ವಾಹನಗಳು ಇದೇ ರಸ್ತೆಯಲ್ಲಿ ಅಪಘಾತಕ್ಕೀಡಾದ ನಿದರ್ಶನಗಳಿವೆ.ಅಪಘಾತದಲ್ಲಿ ಪುತ್ರ ಜಾನಕಿ ರಾಮ್ ಸಾವಿಗೀಡಾದ ಶೋಕ ಹರಿಕೃಷ್ಣ ಅವರನ್ನು ನಿರಂತರವಾಗಿ ಕಾಡುತ್ತಿತ್ತು. ಈಗ ಇದೇ ಹೆದ್ದಾರಿಯಲ್ಲಿ ನಂದಮೂರಿ ಹರಿಕೃಷ್ಣ ದುರಂತ ಸಾವಿಗೀಡಾಗಿದ್ದಾರೆ.

loading...