ಭೂ ಸ್ವಾಧೀನ ವಿಳಂಬ ಯೋಜನೆಗಳಿಗೆ ಶೀಘ್ರ ಅನುಮತಿ

0
10
loading...

ಬೆಂಗಳೂರು: ರಕ್ಷಣಾ ಭೂಮಿ ಸ್ವಾಧೀನ ಸಂಬಂಧ ವಿಳಂಬವಾಗಿರುವ ಯೋಜನೆಗಳಿಗೆ ಶೀಘ್ರ ಅನುಮತಿ ನೀಡುವಂತೆ ರಕ್ಷಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವಿವಿಧ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ವರ್ಗಾವಣೆ ಸಂಬಂಧ ವಿಧಾನಸೌಧದಲ್ಲಿ ಸಿಎಂ ಜತೆ ಚರ್ಚೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಗೆ ಬಂದಿದ್ದಾಗ ಸಿಎಂ ಈ ಬಗ್ಗೆ ಸಮಾಲೋಚಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಜತೆ ನಮ್ಮ ರಕ್ಷಣಾ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದರು.ಇಂದು ನಡೆದ ಸಭೆಯಲ್ಲಿ ಬೆಂಗಳೂರಿನಲ್ಲಿ ಕೈಗೊಂಡಿರುವ 10ಯೋಜನೆಗಳಿಗೆ ಭೂ ವರ್ಗಾವಣೆ ಮಾಡಲು ಸೂಚಿಸಿದ್ದೇನೆ.ಯಾವುದೇ ವಿಳಂಬವಾಗದಂತೆ ರಕ್ಷಣಾ ಅಧಿಕಾರಿಗಳು ಅನುಮತಿ ನೀಡಬೇಕು ಎಂದು ಸ್ಪಷ್ಟಪಡಿಸಿದರು.
ನಾವು ನೀಡಿದ ಭೂಮಿಗೆ ಪರ್ಯಾಯವಾಗಿ ರಕ್ಷಣಾ ಇಲಾಖೆಗೆ ರಾಜ್ಯ ಸರ್ಕಾರ ಸಮಾನ ಮೌಲ್ಯದ ಭೂಮಿಯನ್ನು ನೀಡಲು ಒಪ್ಪಿಕೊಂಡಿದೆ. ರಕ್ಷಣಾ ಇಲಾಖೆಯ ನಿಯಮಾವಳಿ ಅನ್ವಯ ಭೂಮಿ ವರ್ಗಾವಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧರ ಕೈಗೊಂಡು ಭೂಮಿಯನ್ನು ರಕ್ಷಣಾ ಇಲಾಖೆಗೆ ವರ್ಗಾವಣೆ ಮಾಡಲಾಗುವುದು ಎಂದು ವಿವರಿಸಿದರು.
ಒಟ್ಟು 45,165 ಚದರ ಮೀಟರ್ ರಕ್ಷಣಾ ಇಲಾಖೆಯ ಸುಮಾರು 282 ಕೋಟಿ ರೂ. ಮೌಲ್ಯದ ಭೂಮಿಯನ್ನು ಬಿಬಿಎಂಪಿಗೆ ವರ್ಗಾಯಿಸಲು ಅನುಮತಿ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಸಮಮೌಲ್ಯದ ಭೂಮಿಯನ್ನು ರಕ್ಷಣಾ ಇಲಾಖೆ ಬೇಡಿಕೆ ಇಟ್ಟ ಕಡೆ ಮಂಜೂರು ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಜಮೀನು ಮಂಜೂರು ಪ್ರಕ್ರಿಯೆಗೆ ಕಾಯದೆ ಕೂಡಲೇ ಕಾಮಗಾರಿ ನಡೆಸಲು ರಕ್ಷಣಾ ಇಲಾಖೆ ಅಧಿಕಾರಿಗಳು ಅನುಮತಿ ನೀಡಲು ಸೂಚಿಸಲಾಗಿದೆ.
ಇನ್ನು ಏರ್ ಶೋ ಆಯೋಜನೆಗಾಗಿ ಹಲವು ರಾಜ್ಯಗಳಿಂದ ಮನವಿ ಸಲ್ಲಿಸಲಾಗಿದ್ದು, ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ರಕ್ಷಣಾ ಸಚಿವೆ ಸ್ಪಷ್ಟಪಡಿಸಿದರು.
ಬೆಂಗಳೂರಿನಿಂದ ಲಕ್ನೋಗೆ ಏರ್ ಶೋ ಸ್ಥಳಾಂತರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಕ್ಷಣಾ ಇಲಾಖೆ ಈ ಸಂಬಂಧ ಇನ್ನೂ ಯಾವುದೇ ದಿನಾಂಕ, ಸ್ಥಳವನ್ನು ಘೋಷಿಸಿಲ್ಲ. ಸೂಕ್ತ ಸಮಯ ಬಂದಾಗ ಸ್ಥಳ, ದಿನಾಂಕವನ್ನು ಘೋಷಿಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಏರ್ ಶೋ ಬೆಂಗಳೂರಿನಲ್ಲೇ ನಡೆಸುವಂತೆ ರಕ್ಷಣಾ ಮಂತ್ರಿಗೆ ಮನವಿ ಮಾಡಿದ್ದು, ಈ ಬಗ್ಗೆ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

loading...