ಮಕ್ಕಳಿಗೆ ಧಾರ್ಮಿಕ ತತ್ವದ ಮಾರ್ಗದರ್ಶನ ಅವಶ್ಯ: ಪಾಟೀಲ ಪುಟ್ಟಪ್ಪ

0
4
loading...

ಕನ್ನಡಮ್ಮ ಸುದ್ದಿ, ಧಾರವಾಡ: ಈ ನಾಡಿನಲ್ಲಿ ಧಾರ್ಮಿಕ ಪ್ರಜ್ಞೆ ಏನಾದರೂ ಉಳಿದಿದ್ದರೆ ಮಹಿಳೆಯರಿಂದ ಮಾತ್ರ ಮತ್ತು ಉಳಿದು ಮುಂದುವರಿಯಬೇಕೆಂದರೆ ಅವರಿಂದಲೇ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೇಳಿದರು.
ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡ “ಹರಿದಾಸರು ಕಂಡ ಮಹಾಲಕ್ಷ್ಮೀ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಮನೆಯ ಯಜಮಾನನ ಹಾಗೂ ಆತನ ಪತ್ನಿ ಮಕ್ಕಳ ಮನಃಪರಿವರ್ತನೆ ಮಾಡಿ ಧಾರ್ಮಿಕ ತತ್ವದಡಿ ಸಾಗುವಂತೆ ಮಾರ್ಗದರ್ಶನ ಮಾಡಬೇಕು ಎಂದರು.
ಪ್ರಫುಲ್ಲಾ ನಾಯಕ ಮಾತನಾಡಿ, ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಪ್ರೊ. ಮಾಲತಿ ಮುದಕವಿಯವರು ಎಲ್ಲ ಹರಿದಾಸರು ರಚಿಸಿದ ಮಹಾಲಕ್ಷ್ಮಿಯ ಮೇಲಿನ ಹಾಡುಗಳ ಹರಿದಾಸ ಸಾಹಿತ್ಯ ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ವಿವರಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ, ಸರೋಜಾರಾವ ಹಾಗೂ ಶ್ರೀಮತಿ ರೋಹಿಣಿರಾವ, ಆರ್.ಬಿ. ಪಾಟೀಲ, ಪ್ರೊ. ಆರ್.ಬಿ. ಗುತ್ತಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಳಮಡ್ಡಿಯ ಶ್ರೀರಾಮ ಭಜನಾ ಮಂಡಳಿಯವರು ‘ವೆಂಕಟಾದ್ರಿ ನಿಲಯ ಪಂಕಜನಾಭವ’ ಮೋಹನದಾಸರ ಕೃತಿ ಪ್ರಸ್ತುತಪಡಿಸಿ, ಪ್ರಥಮ ಬಹುಮಾನ ಪಡೆದರು. ದ್ವಿತೀಯ ಬಹುಮಾನವನ್ನು ರಾಯಟರಗಲ್ಲಿಯ ‘ಓಂಕಾರ ಭಜನಾ ಮಂಡಳಿಯವರು, ವಿಜಯದಾಸರ ಕೃತಿ’ ಭಗವತಿ ತೋರಮ್ಮ ಅಮ್ಮಾ’ ಪ್ರಸ್ತುತಿ ಪಡಿಸಿ ತಮ್ಮದಾಗಿಸಿಕೊಂಡರು. ತೃತೀಯ ಬಹುಮಾನಕ್ಕೆ ಮಹಿಷಿ ರಸ್ತೆಯ ಕೇಳಕರ ಮಾರುತಿಯ ಶಾರದಾ ಭಜನಾ ಮಂಡಳಿಯವರು ‘ಹರಪನಹಳ್ಳಿ ಭೀಮವ್ವನವರ ಕೃತಿ ‘ನಿಲ್ಲು ನಿಲ್ಲೆ ಕೊಲ್ಲಾಪುರದೇವಿ, ಇಲ್ಲೆ ಬಾರೆ ಗೆಜ್ಜೆ ಗಲ್ಲೆನುತ’ ಪ್ರಸ್ತುತಪಡಿಸಿದರು.

loading...