ಮಳೆ ನೀರು ಕೊಯ್ಲು ಅಭಿಯಾನ ಆರಂಭ

0
23
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ತಾಲೂಕಿನಲ್ಲಿ ಪ್ರಥಮ ಬಾರಿಗೆ ಮಳೆ ನೀರು ಕೊಯ್ಲಿನ ಬಗ್ಗೆ ತಾಲೂಕ ಪಂಚಾಯತ ಮೂಲಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರಾರಂಭಿಕವಾಗಿ ಉಮ್ಮಚಗಿ, ಕಂಪ್ಲಿ, ಹಾಸಣಗಿ ಪಂಚಾಯತದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಳೆದ ಮೂರು-ನಾಲ್ಕು ವರ್ಷ ತಾಲೂಕಿನ ಕೆಲವು ಪ್ರದೇಶದಲ್ಲಿ ನೀರಿನ ಅಂತರರ್ಜಲ ಮಟ್ಟ ಕುಸಿದು ಜನರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ನೀರಿನ ಬವಣೆ ನೀಗಿಸಲು ಇಲ್ಲಿನ ತಾಲೂಕ ಪಂಚಾಯತ ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳಿಗೂ ಭೇಟಿ ನೀಡಿ “ಮಳೆ ನೀರು ಕೊಯ್ಲು” ಅಭಿಯಾನವನ್ನು ಆರಂಭಿಸಿದೆ.
ಮನೆಯ ತಾರಸಿಯಿಂದ ಬೀಳುವ ಶುದ್ಧ ಮಳೆ ನೀರು ಸುಮ್ಮನೆ ಹರಿದು ಚರಂಡಿ ಸೇರಿ ಮುಂದೇ ಕೊಳಚೆ ನೀರಾಗಿ ಎಲ್ಲೋ ವ್ಯರ್ಥವಾಗಿ ಹೋಗುತ್ತದೆ. ಅದರ ಬದಲಿಗೆ ಆ ನೀರನ್ನು ಭೂಮಿಯೊಳಗೆ ಇಂಗಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಈ ಉದ್ದೇಶವನ್ನು ಇಟ್ಟುಕೊಂಡು ತಾಲೂಕ ಪಂಚಾಯತ ಪ್ರತಿಯೊಂದು ಗ್ರಾ.ಪಂ ಗೆ ಜಾಗೃತಿ ಮೂಡಿಸಲು ತೆರಳುತ್ತಿದೆ.
ಮನೆಯ ತಾರಸಿಯಿಂದ ಪೈಪ್‍ನ್ನು ಅಳವಡಿಸಿ ಅದು ನೇರವಾಗಿ ಡ್ರಮ್‍ಗೆ ಅಥವಾ ಸಿಮೆಂಟ್‍ನ ಸಂಪಿನೊಳಗೆ ಜೋಡಿಸಿ,ನೀರು ಡ್ರಮ್‍ನೊಳಗೆ ಹೋಗುವಂತೆ ಮಾಡಬೇಕು. ಜಾಳಿಗೆ ಅಳವಡಿಸುವ ಮೂಲಕ ಪೈಪ್‍ನಿಂದ ಬರುವ ನೀರಿನಲ್ಲಿರುವ ಕಸ ಕಡ್ಡಿ ಡ್ರಮ್‍ಗೆ ಹೋಗುವುದು ತಡೆಯುತ್ತದೆ. 5 ಅಡಿ ಅಗಲ- ಆಳದ ಹೊಂಡ ತೆಗೆದು ಅದರೊಳಗೆ 5 ರಿಂಗ್ ಅಳವಡಿಸಿ, ಜೆಲ್ಲಿ ಮತ್ತು ಮರಳನ್ನು ತುಂಬಬೇಕು. ಇದರಿಂದ ಮಳೆಯ ನೀರು ಸೋಸಿ ಭೂಮಿಯೊಳಗೆ ಇಂಗುತ್ತದೆ ಎನ್ನುತ್ತಾರೆ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ಇಂಜೀನಿಯರ್ ಕಾರ್ತೀಕ ಹಬ್ಬು.
ಉದ್ಯೋಗ ಖಾತ್ರಿಯಲ್ಲಿ ಸಹಾಯಧನ:
ಮಳೆ ನೀರು ಕೊಯ್ಲಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಫಲಾನುಭವಿಗಳಿಗೆ ಒಟ್ಟೂ 20 ಸಾವಿರ ರೂ.ಸಹಾಯಧನ ನೀಡಲಾಗುತ್ತದೆ. ವೈಯಕ್ತಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಅಳವಡಿಸಬಹುದು. ಅದಕ್ಕೆ ತಗಲುವ ವೆಚ್ಚವನ್ನು ಕ್ರಿಯಾಯೋಜನೆ ಸಿದ್ದಪಡಿಸಿ, ಬೇಕಾಗುವ ಹೆಚ್ಚುವರಿಗೆ ಹಣವನ್ನು ನೀಡಲಾಗುತ್ತದೆ. ಜಾಗದ ಅಳತೆಯನ್ನು ನೋಡಿ ಹಣ ಮಂಜೂರು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

loading...