ಮುಗಿಯುವ ಹಂತದಲ್ಲಿ ಬೆಂಗಳೂರಿನ ಎರಡು ಮೇಲ್ಸೇತುವೆ

0
3
loading...

ಬೆಂಗಳೂರು:ನಗರದ ಜನರಿಗೆ ಯೋಜನೆಯ ಉಪಯೋಗ ಆಗಬೇಕೆಂದರೆ ನಿಗದಿತ ಸಮಯದೊಳಗೆ ರಸ್ತೆ ಕಾಮಗಾರಿಗಳನ್ನು ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ಬಿಡಬೇಕು ಎಂದು ಉಸ್ತುವಾರಿ ಸಚಿವ ಡಾ. ಪರಮೇಶ್ವರ್ ಹೇಳಿದರು.

ಮಂಜುನಾಥನಗರ ಮುಖ್ಯ ರಸ್ತೆಯ ಮೇಲ್ಸೇತುವೆ ಉದ್ಘಾಟನೆಗೊಳಿಸಿ ಮಾತನಾಡಿದ ಅವರು,ಒಟ್ಟು 270.638 ಮೀಟರ್ ಉದ್ದದ ದ್ವಿಮುಖ ಸಂಚಾರದ ಮೇಲ್ಸೇತುವೆಯು 18.18 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದಲ್ಲದೆ 112 ಕೋಟಿ ವೆಚ್ಚದಲ್ಲಿ ಶಿವನಗರ ಹಾಗೂ ಬಸವೇಶ್ವರನಗರದ ಮೇಲ್ಸೇತುವೆಗಳೂ ಮುಗಿಯುವ ಹಂತದಲ್ಲಿದೆ ಎಂದರು.

ಮುಂದಿನ ಮೇಯರ್ ಆಯ್ಕೆ ತೀರ್ಮಾನ ಇನ್ನು ಕೈಗೊಂಡಿಲ್ಲ. ಶೀಘ್ರದಲ್ಲೇ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳಲಿದ್ದೇವೆ.ಆಸ್ತಿ ತೆರಿಗೆಯಲ್ಲಿ ಶೇ.2ರಷ್ಟು ಸಾರಿಗೆ ಸೆಸ್ ವಿಧಿಸುವ ಕುರಿತಂತೆ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡ ನಂತರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ನಗರದ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಿಲ್ಲ ಎಂಬ ಸಾರಿಗೆ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಈಗಾಗಲೇ ಟೆಂಡರ್ಶ್ಯೂರ್, ವೈಟ್‍ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಎಲ್ಲ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು ಎಂದು ಕಿವಿಮಾತು ಹೇಳಿದರು.

ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನು ಮುಂದೆ ಕಾಮಗಾರಿಯ ಟೆಂಡರ್ ಸಮಯದಲ್ಲಿ ಗುತ್ತಿಗೆದಾರರಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಷರತ್ತು ವಿಧಿಸುವಂತೆ ಅವರು ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ 15 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2016-17ನೇ ಸಾಲಿನಲ್ಲಿ 7300 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಅವರು ಹೇಳಿದರು.

ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಜನ ಹೈರಾಣಾಗಿದ್ದಾರೆ. ಈ ಪರಿಸ್ಥಿತಿ ಹೋಗಲಾಡಿಸಲು ಸರ್ಕಾರ ಮತ್ತು ಬಿಬಿಎಂಪಿ ಸಮಾರೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದರು. ನಾನು ಉಸ್ತುವಾರಿ ಸಚಿವರಾದ ನಂತರ ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಯೋಜನೆ ಜಾರಿಗೆ ತಂದು ಕಳ್ಳ ಬಿಲ್ ಪಾವತಿಗೆ ಕಡಿವಾಣ ಹಾಕಿದ್ದೇನೆ. ಅನಧಿಕೃತವಾಗಿ ಹಾಕಲಾಗಿದ್ದ 8 ಕಿ.ಮೀ ಉದ್ದದ ಓಎಫ್‍ಸಿ ಕೇಬಲ್‍ಗಳನ್ನು ತೆರವುಗೊಳಿಸಿದ್ದೇವೆ. ನಗರವನ್ನು ಫ್ಲೆಕ್ಸ್ ಮುಕ್ತ ಮಾಡಿದ್ದೇವೆ. ಯಾರೇ ಅನಧಿಕೃತ ಜಾಹಿರಾತು ಅಳವಡಿಸಿದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದೇನೆ. ಈಗಾಗಲೇ 300ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಗೃಹ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡದಂತೆ ಮುಂದೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಟೆಂಡರ್ ಕರೆಯುವಾಗ ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಲು ಒತ್ತು ನೀಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿ ಬಳಿಕ ಮಾತನಾಡಿದ ಸ್ಥಳೀಯ ಶಾಸಕ ಸುರೇಶ್ ಕುಮಾರ್,ಟೈಬಾಂಡ್ ಪ್ರೋಗ್ರಾಂ ಮಾಡದಿದ್ದರೆ ಯೋಜನೆ ಯ ಉಪಯೋಗ ಜನರಿಗೆ ಆಗೋದಿಲ್ಲ.ಇಲ್ಲಿ ಕಾಮಗಾರಿ ನಡೆಯುವ ವೇಳೆ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬಳಿ ಮುಗಿಯುವ ಹಂತದಲ್ಲಿರುವ ಫ್ಲೈಓವರ್‍ನ್ನು ದ್ವಿಮುಖ ಸಂಚಾರದ ಫ್ಲೈಓವರ್ ಅನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಬಿಡಿಎಯ ಹೆಚ್ಚುವರಿ 10 ಎಕರೆ ಜಾಗ ಕೆಪಿಟಿಸಿಎಲ್ ಒತ್ತುವರಿ ಮಾಡಿದ್ದು, ಅದನ್ನು ಬಿಟ್ಟು ಕೊಟ್ಟರೆ ಕಸದ ಲಾರಿಗಳನ್ನು ಪಾರ್ಕ್ ಮಾಡಬಹುದು ಎಂದರು.

ಮೇಯರ್ ಸಂಪತ್‍ರಾಜ್, ಆಡಳಿತಪಕ್ಷದ ನಾಯಕ ಎಂ.ಶಿವರಾಜ್, ಮಾಜಿ ಮೇಯರ್ ಜಿ.ಪದ್ಮಾವತಿ,ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯರು ಮತ್ತಿತರ ಅಧಿಕಾರಿಗಳು ಹಾಜರಿದ್ದರು.

loading...