ಮೂಢನಂಬಿಕೆಯಿಂದ ಶೋಷಣೆ ಹೆಚ್ಚು: ನವೀನಶಾಸ್ತ್ರಿ

0
5
loading...

ಕನ್ನಡಮ್ಮ ಸುದ್ದಿ-ಧಾರವಾಡ: ಇವತ್ತು ಮೂಢನಂಬಿಕೆಗಳ ಅತಿಯಾದ ಸೃಷ್ಟಿಯಿಂದ ಕೆಲವರು ಜನರ ಶೋಷಣೆ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ವರೂರಿನ ಆಚಾರ್ಯ ಗುಣಧರನಂದಿ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕ ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ ಹೇಳಿದರು.
ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ಡಾ. ಶಿವರಾಂ ಕಾರಂತರ ‘ಅಂಧಶ್ರದ್ಧೆಗಳು, ನಂಬಿಕೆಗಳು’ ಎಂಬ ಪಠ್ಯ ಆಧಾರಿತ ಸಂವಾದದಲ್ಲಿ ಮಾತನಾಡಿದರು.
ಪ್ರಕೃತಿಯ ವಿಕೋಪಗಳಿಗೆ ಬೆದರಿದ ಪ್ರಾಚೀನ ಕಾಲದ ಮನುಷ್ಯರು ತಮ್ಮ ಭಯಗಳನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ ತನಗಿಂತಲೂ, ತನ್ನ ಶಕ್ತಿಗಿಂತಲೂ ದಿವ್ಯವಾದ ಶಕ್ತಿವೊಂದಿದೆ ಎಂದು ಅರಿತು, ಅದರ ಶಾಂತಿಗಾಗಿ ಹಲವಾರು ನಂಬಿಕೆಗಳನ್ನು, ಮೂಢನಂಬಿಕೆಗಳನ್ನು ಸೃಷ್ಟಿ ಮಾಡಿದರು ಅಂದಿನಿಂದ ಇಂದಿನವರೆಗೆ ನಡೆದು ಬಂದಿರುವ ಪದ್ಧತಿಗಳು, ಮೂಢನಂಬಿಕೆಗಳು ನಿರಂತರವಾಗಿ ಮುನ್ನಡೆದಿವೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿನದತ್ತ ಹಡಗಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದು ಮಂತ್ರ, ಯಂತ್ರ, ತಂತ್ರಗಳ ನಡುವೆ ಸಿಲಿಕಿದ ಮನುಷ್ಯನ ಮನಸ್ಸು ದುರ್ಬಲಗೊಳ್ಳುತ್ತ ನಡೆದಿದೆ. ಸಮಾಜದಲ್ಲಿರುವ ನಂಬಿಕೆಗಳು ಮೂಢನಂಬಿಕೆಗಳಾದಾಗ ಅನೇಕ ದುರಂತಗಳು ಸಂಭವಿಸುತ್ತವೆ. ಮೂಢನಂಬಿಕೆಗಳನ್ನೇ ಸೃಷ್ಟಿಮಾಡಿ, ಜನರ ಶೋಷಣೆ ಮಾಡುತ್ತಿರುವ ಅನೇಕ ಜನ ನಮ್ಮ ಮಧ್ಯದಲ್ಲಿದ್ದಾರೆ, ಅಂತಹವರಿಂದ ಸಾಧ್ಯವಾದಷ್ಟು ದೂರವಿರುವುದು ಒಳ್ಳೆಯದು ಎಂದರು. ಬಸವಣ್ಣಿ ಪ್ರಾರ್ಥಿಸಿದರು. ವರ್ಷಿತಾ ದೇಸಾಯಿ ಪರಿಚಯಿಸಿದರು. ಪಲ್ಲವಿ ಬಡಿಗೇರ ನಿರೂಪಿಸಿದರು.

loading...