ರಸ್ತೆಗಳಲ್ಲಿ ಬಿಡಾಡಿ ದನಗಳದ್ದೆ ಸದ್ದು: ವಾಹನ ಸಂಚಾರಕ್ಕೆ ಅಡ್ಡಿ

0
4
loading...

ಬಸವರಾಜ ದಂಡಿನ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಇದೀಗ ಬೀಡಾಡಿ ದನಗಳ, ಗೂಳಿಗಳ ಪರ್ವ ಪುನಃ ಆರಂಭಗೊಂಡಿದೆ. ಗೂಳಿಗಳ ಹಾವಳಿ ಅವಳಿ ನಗರದ ಜನತೆಗೆ ಹೊಸದೇನಲ್ಲ. ಆದರೆ ಗೂಳಿಗಳ ಹಾವಳಿಯಿಂದ ಹಾನಿಗೊಳಗಾಗುವವರಿಗೆ ಹೊಸ ಹೊಸ ರೀತಿಯ ಪೆಟ್ಟುಗಳಾಗುವದು ಹೊಸದೇನಿಸಿದೆ.ಗದಗ-ಬೆಟಗೇರಿ ಅವಳಿ ನಗರದ ಮುಖ್ಯ ರಸ್ತೆ, ಜನ-ವಾಹನ ದಟ್ಟಣೆಯ ಪ್ರದೇಶಗಳಲ್ಲಿ, ಸರ್ಕಲ್‍ಗಳಲ್ಲಿ ಈ ಬೀಡಾಡಿ ದನ, ಗೂಳಿಗಳ ಕಾದಾಟದಿಂದಾಗಿ ಜನ-ವಾಹನ ಮೂಲೆ ಸೇರುವಂತಾಗಿದೆ. ಗದುಗಿನ ಮಹಾತ್ಮಾ ಗಾಂಧಿ ಸರ್ಕಲ್, ಮಹೇಂದ್ರಕರ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್ (ಟಾಂಗಾಕೂಟ), ಬಸವೇಶ್ವರ ಸರ್ಕಲ್ (ಹತ್ತಿಕಾಳ ಕೂಟ), ಕೆ.ಎಚ್.ಪಾಟೀಲ ಸರ್ಕಲ್, ರೋಟರಿ ಸರ್ಕಲ್, ತಹಶೀಲ್ದಾರ ಕಚೇರಿ, ಝೇಂಡಾ ಸರ್ಕಲ್, ಸ್ಟೇಷನ್ ರೋಡ, ಹಳೇ ಬಸ್ ನಿಲ್ದಾಣ, ಮಾಳಶೆಟ್ಟಿ ಸರ್ಕಲ್, ಜನತಾ ಬಝಾರ್, ಗ್ರೇನ್ ಮಾರ್ಕೆಟ್, ಕೆ.ಸಿ.ರಾಣಿ ರೋಡ, ಪಂಚರಹೊಂಡ, ಮುಳಗುಂದ ನಾಕಾ, ಬೆಟಗೇರಿಯ ಲೋಯಲಾ ಕಾನ್ವೆಂಟ್ ಸಮೀಪದ ಸರ್ಕಲ್, ಅಂಬಾಭವಾನಿ ಸರ್ಕಲ್, ಟೆಂಗಿನಕಾಯಿ ಬಜಾರ, ಬೆಟಗೇರಿ ಬಸ್‍ಸ್ಟ್ಯಾಂಡ್, ಜರ್ಮನ್ ದವಾಖಾನೆ ಹತ್ತೀರ ಹೀಗೆ ಮುಂತಾದೆಡೆ ಈ ಬೀಡಾಡಿ ದನಗಳು, ಗೂಳಿಗಳು ಬೀಡು ಬಿಟ್ಟು ರಸ್ತೆಯ ಮಧ್ಯದಲ್ಲಿಯೇ ಮಲಗುವ ನಿಲ್ಲುವ ಕಾದಾಡುವದರಿಂದಾಗಿ ಜನ-ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗುತ್ತಿದೆ.
ಬೀಡಾಡಿ ದನಗಳ, ಗೂಳಿಗಳ ಕಾದಾಟದಿಂದಾಗಿ ಮಕ್ಕಳು, ಮಹಿಳೆಯರು, ವೃದ್ಧರು ಕೈಕಾಲು ಮುರಿದುಕೊಂಡು ಆಸ್ಪತ್ರೆ ಮನೆ ಸೇರಿದ ಹಲವಾರು ಉದಾಹರಣೆಗಳಿವೆ. ಈ ಬೀಡಾಡಿ ದನಗಳ, ಗೂಳಿಗಳ ಹಾವಳಿಯು ಗದಗ-ಬೆಟಗೇರಿ ನಗರಸಭೆ ಹಾಗೂ ಟ್ರಾಫಿಕ್ ಪೊಲೀಸರಿಗೆ ಬಹು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏನು ಕಾರಣ ? ಬೀಡಾಡಿ ದನಗಳ, ಗೂಳಿಗಳ ಸಂತತಿ ದಿನದಿಂದ ದಿನಕ್ಕೆ ಬೆಳೆಯುತ್ತ ನಡೆದಿದೆ. ಹೋಟೇಲ್, ರೆಸ್ಟೋರೆಂಟ್, ಖಾನಾವಳಿಯಲ್ಲಿ ಅಳಿದುಳಿದ ಆಹಾರ ಪದಾರ್ಥ, ಮುಸುರೆಯನ್ನು ರಸ್ತೆ ಬದಿಗೆ ಹಾಕುವದಿಂದ ಚರಂಡಿಗೆ ಸುರಿಯುವದರಿಂದ ನಾಲಿಗೆ ಚಟಕ್ಕೆ ಈ ಬೀಡಾಡಿ ದನಗಳು, ಗೂಳಿಗಳು ಇದನ್ನೇಲ್ಲ ತಿಂದು ತೇಗಿ ಆ ಪ್ರದೇಶವನ್ನು ಬಿಟ್ಟು ಬೇರೆ ಪ್ರದೇಶಕ್ಕೆ ಹೋಗುತ್ತಿಲ್ಲ. ಇದಕ್ಕೆ ಮನೆಯ ಮುಂದೆ ಹಾಕುವ ಆಹಾರ ಪದಾರ್ಥ ಹಾಗೂ ಮುಸುರಿಯೂ ಕಾರಣ ಎನ್ನಲಾಗುತ್ತಿದೆ. ಗೋಶಾಲೆಯಲ್ಲಿ ಉಳಿಯುತ್ತಿಲ್ಲ.ಜನದಟ್ಟಣೆಯ ಪ್ರದೇಶದಲ್ಲಿ ಹೊಂದಿಕೊಂಡಿದ್ದ ಇವುಗಳು ಗೋಶಾಲೆಯ ಇತರ ಜಾನುವಾರುಗಳೊಂದಿಗೆ ಹೊಂದಿಕೊಳ್ಳಲಾಗದೇ ಸಾವನ್ನಪ್ಪುತ್ತಿವೆ ಎಂದೆನ್ನುತ್ತಾರೆ ಪ್ರಾಣಿ ದಯಾ ಸಂಘದವರು.ಗೋವುಗಳನ್ನು ಗೋಮಾತೆ ಎಂದು ಪೂಜಿಸುವ, ಕಾಮಧೇನು ಎಂದು ಪೂಜ್ಯಭಾವನೆಯಿಂದ ಕಾಣುವ ಭಾರತೀಯ ಪರಂಪರೆ ಸಂಸ್ಕøತಿಯಲ್ಲಿ ಗೋಮಾತೆಗೆ ಅಗ್ರಸ್ಥಾನವನ್ನು ನೀಡಲಾಗಿದೆ. ಆದರೆ ಅವುಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಗೋಹತ್ಯೆಯ ವಿರುದ್ಧ ಕಾನೂನಿನ ಕಟ್ಟನಿಟ್ಟಿನ ಕ್ರಮ ಕೈಗೊಳ್ಳಬೇಕು. ವಿದೇಶಗಳಿಗೆ ಗೋವು ಮಾಂಸವನ್ನು ರಫ್ತು ಮಾಡುವದನ್ನು ನಿಷೇಧಿಸಬೇಕು. 2 ವರ್ಷದೊಳಗಿನ ಬೀಡಾಡಿ ದನಕರುಗಳನ್ನು, ಗೂಳಿಗಳನ್ನು ಹಿಡಿದು ಗೋಶಾಲೆಗೆ ಬಿಟ್ಟು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು, ಇದರಿಂದಾಗಿ ಈ ಕರುಗಳು ಸ್ವಚಂದ ವಾತಾವರಣದಲ್ಲಿ ಬೆಳೆದು ಬರುವದರಿಂದ ಅವುಗಳಿಗೆ ಬಲ-ಬೆಲೆ ಬರುವದು ಜೊತೆಗೆ ಗೋಮಾತೆಯನ್ನು ಸಂರಕ್ಷಿಸಿದ ಪುಣ್ಯವೂ ಪ್ರಾಪ್ತಿಯಾಗುವದು. ಈ ಕರುಗಳು ಗೋಶಾಲೆಯಲ್ಲಿ ಉತ್ತಮ ಪೋಷಣೆ, ಸಂಸ್ಕಾರದ ನೆಲೆಯಲ್ಲಿ ಬೆಳೆಯುವದರಿಂದ ಮುಂದಿನ ಸಂತತಿಯೂ ಇಲ್ಲಿಯೇ ಬೆಳೆದು ಬರುವದರಿಂದ ಸಹಜವಾಗಿ ರಸ್ತೆಗಳ ಬೀಡಾಡಿ ದನಕರುಗಳ, ಗೂಳಿಗಳ ಸಂಖ್ಯೆಯೂ ಇಳಿಮುಖವಾಗಿ ಕೊನೆಯಾಗಬಹುದು. ಈ ಕಾರ್ಯಕ್ಕೆ ಪ್ರಜ್ಞಾವಂತರು, ಪ್ರಾಣಿ ದಯಾ ಸಂಘದವರು, ಪ್ರಾಣಿ ಹಿಂಸಾ ನಿವಾರಣಾ ಸಂಘ ಗೋಮಾತೆಯನ್ನು ವ್ಯವಸ್ಥಿತವಾಗಿ ಸಂರಕ್ಷಿಸಲು ಮುಂದಾಗಬೇಕು ಈ ಕಾರ್ಯಕ್ಕೆ ಗದಗ-ಬೆಟಗೇರಿ ನಗರಸಭೆ, ಪಶು ಸಂಗೋಪನಾ ಇಲಾಖೆ, ಪೊಲೀಸ್ ಇಲಾಖೆ ಬದ್ಧತೆ ಮತ್ತು ಇಚ್ಛಾಶಕ್ತಿಯಿಂದ ಕೈಜೋಡಿಸಬೇಕಷ್ಟೇ. ಕರ್ನಾಟಕ ರಾಜ್ಯದಲ್ಲಿ ಇದುವರೆಗೂ ಆಡಳಿತ ಚುಕ್ಕಾಣಿ ಹಿಡಿದ ಎಲ್ಲ ರಾಜಕೀಯ ಪಕ್ಷಗಳೂ ಚುನಾವಣೆಗೂ ಮುನ್ನ ಗೋವು ಸಂರಕ್ಷಣೆ, ಪ್ರಾಣಿ ಬಲಿ ತಡೆ, ಗೋಹತ್ಯೆ ನಿಷೇಧ ಕುರಿತು ದೊಡ್ಡ ದೊಡ್ಡ ಭಾಷಣ ಮಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ದೊಡ್ಡ ದೊಡ್ಡದಾಗಿ ಬರೆದುಕೊಂಡು ಕೊನೆಗೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರ ಮಾಡಿದ್ದೇನು ? ಎಲ್ಲವೂ ತದ್ವಿರುದ್ಧ ಗೋವಿನ ವಿಷಯದಲ್ಲಿ ರಾಜಕಾರಣ ಮಾಡಿದವರು ಇಂದು ಏನಾಗಿದ್ದಾರೆ. ಏನೇನು ಕಳೆದುಕೊಂಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಗೋಮಾತೆ, ಕಾಮಧೇನಿಗೆ ಮಾಡಿದ ದ್ರೋಹಕ್ಕೆ ಭಾರೀ ಪೆಟ್ಟು ಅನುಭವಿಸುತ್ತಿದ್ದಾರೆ. ಗದಗ-ಬೆಟಗೇರಿ ನಗರಸಭೆಯ ಸರ್ವ ಸದಸ್ಯರ ಸಾಧಾರಣ ಸಭೆಯಲ್ಲಿ ಈ ವಿಷಯನ್ನು ಪ್ರತ್ಯೇಕವಾಗಿಟ್ಟು ವ್ಯಾಪಕ ಚರ್ಚೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಅದಕ್ಕೂ ಮುನ್ನ ಪ್ರಜ್ಞಾವಂತರು, ಪ್ರಾಣಿ ದಯಾ ಸಂಘ, ಪ್ರಾಣಿ ಹಿಂಸಾ ನಿವಾರಣಾ ಸಂಘದವರನ್ನು ಜೈನ ಸಮಾಜದ ಮುಖಂಡರನ್ನು ಆಮಂತ್ರಿಸಿ ಸಲಹೆ ಸೂಚನೆ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು. -ಮಹೇಶ ಕೋಟಿ ಪ್ರಾಣಿ ಹಿಂಸಾ ನಿವಾರಣಾ ಸಂಘ.

loading...