ರಸ್ತೆ ಹದಗೆಟ್ಟು ಸಂಚಾರಕ್ಕೆ ತೀವ್ರ ತೊಂದರೆ

0
3
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಕಲಭಾಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳ್ವೆಕೋಡಿ ಕ್ರಾಸ್‌ನಿಂದ ಮೀನು ಮಾರುಕಟ್ಟೆಗೆ ಹೋಗುವ ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಅಳ್ವೆಕೋಡಿ ಕ್ರಾಸ್‌ನಿಂದ ಮೀನು ಮಾರುಕಟ್ಟೆಗೆ ಹೋಗುವ ಮಹಾಸತಿ ದೇವಿಯ ಗುಡಿಯ ಬಳಿ ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದ್ದು, ರಸ್ತೆಯೆಲ್ಲ ಕಿತ್ತುಹೋಗಿವೆ. ಈ ಹೊಂಡಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆ ಯಾವುದು..? ಹೊಂಡ ಯಾವುದು..? ತಿಳಿಯದೆ ಅಪಘಾತ ಸಂಭವಿಸುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನಿಗರು ಮತ್ತು ಸೈಕಲ್ ಸವಾರರು ಪದೇ ಪದೇ ಈ ರಸ್ತೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರುವಂತಾಗಿದೆ.

ಅಳ್ವೆಕೋಡಿ, ಹಂದಿಗೋಣ, ಕಲಭಾಗ ಸೇರಿದಂತೆ ಆ ಭಾಗದ ಹಲವು ಗ್ರಾಮಸ್ಥರು ಮತ್ತು ಪಟ್ಟಣದ ಜನರು ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಹೆದ್ದಾರಿ ಮೂಲಕವೇ ಮೀನುಮಾರುಕಟ್ಟೆಗೆ ತೆರಳುವುದರಿಂದ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತದೆ. ಹೊಂಡಗಳು ಸಂಪೂರ್ಣ ರಸ್ತೆಯನ್ನು ನುಂಗಿಕೊಂಡಿದ್ದರಿಂದ ಸಂಚಾರ ದುಸ್ತರವಾಗಿದೆ. ಹಾಗಾಗಿ ಹದಗೆಟ್ಟ ಈ ರಸ್ತೆಯನ್ನು ಸಂಬಂಧ ಇಲಾಖೆ ಶೀಘ್ರ ದುರಸ್ತಿ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಇಲ್ಲವಾದರೆ ಈ ಸಂಬಂಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಆಟೋ ಚಾಲಕರು ಮತ್ತು ಬೈಕ್ ಸವಾರರು ನೀಡಿದ್ದಾರೆ.

loading...