ರೋಗ ಮುಕ್ತ ಸಮಾಜಕ್ಕೆ ಸಿರಿಧಾನ್ಯಗಳ ಬಳಕೆ ಅಗತ್ಯ: ನಿಜಲಿಂಗಪ್ಪ

0
0
loading...

ಕನ್ನಡಮ್ಮ ಸುದ್ದಿ-ಹಾವೇರಿ: ಹಿಂದೆ ಸಿರಿಧಾನ್ಯಗಳನ್ನು ಬಡವರು ಮಾತ್ರ ಉಪಯೋಗಿಸುತ್ತಿದ್ದರು. ಇತ್ತೀಚೆಗೆ ಸಿರಿಧಾನ್ಯಗಳ ಮೌಲ್ಯಯುತ ಪಾಷ್ಟಿಕಾಂಶಗಳನ್ನು ಶ್ರೀಮಂತರೂ ಉಪಯೋಗಿಸುತ್ತ್ತಿದ್ದಾರೆ. ಸಿರಿಧಾನ್ಯಗಳಿಗೆ ಮರಳೋಣ, ರೋಗಮುಕ್ತ ಆರೋಗ್ಯವಂತ ಸಮಾಜ ನಿರ್ಮಿಸೋಣ ಎಂದು ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಹೇಳಿದರು.
ತಾಲೂಕಿನ ಅಗಡಿ ಗ್ರಾಮದಲ್ಲಿ ಸ್ಪೂರ್ತಿ ವಿದ್ಯಾಕುಟೀರ ಹಾಗೂ ಗಜಾನನ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಫಕ್ಕೀರಪ್ಪ ಪಾರ್ವತಮ್ಮ ಬಸೇಗಣ್ಣಿ ಕೃಷಿಕ ದಂಪತಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಬೇಕರಿ ಪದಾರ್ಥಗಳ ಸೇವನೆ, ಜೀವನ ಶೈಲಿ ಹಾಗೂ ನಮ್ಮ ಆಹಾರ ಪದ್ಧತಿಯಿಂದ ಓಣಿ ಓಣಿಗೂ ಆಸ್ಪತ್ರೆಗಳಾಗಿವೆ. ಸಿರಿಧಾನ್ಯಗಳ ಊಟದಿಂದ ಸಕ್ಕರೆ ಖಾಯಿಲೆ, ಕ್ಯಾನ್ಸರ್‌ ಖಾಯಿಲೆ ಹಾಗೂ ಬಿ.ಪಿಗಳನ್ನು ದೂರಮಾಡಬಹುದು ಎಂದು ತಿಳಿಸಿದರು.
ಇಂಜನಿಯರಿಂಗ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ತೆರಳಲಿರುವ ಚೇತನ ಚಿನ್ನಪ್ಪ ಬಸೇಗಣ್ಣಿ ಅವರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರಮ ಸಂಸ್ಕೃತಿಯನ್ನು ಕಲಿಸುವ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿಲ್ಲ ಹೀಗಾಗಿ ಉದ್ಯೋಗಾವಕಾಶಗಳು ನಮ್ಮಲ್ಲಿ ಕಡಿಮೆ. ಜರ್ಮನಿಯಲ್ಲಿ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಾರೆ ನಮ್ಮ ದೇಶದಲ್ಲಿ ಸರಕಾರಿ ಶಾಲೆಗಳು ಉಳಿಯಬೇಕೆಂದರೆ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸಿರಿ ಎಂದು ಚೇತನ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಸಿರಿಧಾನ್ಯಗಳ ಬಳಕೆ ಕುರಿತು ವಿಷಯ ಮಂಡಿಸಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಪಡದ ಪ್ರೌಢಶಾಲೆಯ ಚೈತ್ರಾ ಅಂಗಡಿ, ಬಸವರಾಜ ಯಾತಗಿ, ವೀರಪ್ಪ ಕಂಬಳಿ, ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಹಿತಿ ಹನುಮಂತಗೌಡ ಗೊಲ್ಲರ ಅಧ್ಯಕ್ಷತೆ ವಹಿಸಿ ಮಾತನಾಡಿ, ಊರಿಗೊಂದು ದನಗಳ ಆಸ್ಪತ್ರೆ ಇದ್ದರೆ ಓಣಿಗೊಂದು ಜನರ ಆಸ್ಪತ್ರೆಗಳಿರುತ್ತವೆ. ನಮ್ಮ ಆಹಾರ ಪದ್ಧತಿಯಿಂದ ರೋಗಗಳನ್ನು ನಾವೇ ಬರಮಾಡಿಕೊಳ್ಳುತ್ತಿದ್ದೇವೆ. ಹಿಂದಿನವರು ಅಜ್ಜಿಮನೆಯಲ್ಲಿ ಹುಟ್ಟುತ್ತಿದ್ದರು ಅದಕ್ಕಾಗಿ ಅಜ್ಜಿಮನೆಗೆ ಪದೇ ಪದೇ ಹೋಗುತ್ತಿದ್ದರು. ಇಂದಿನವರು ಆಸ್ಪತ್ರೆಯಲ್ಲಿ ಹುಟ್ಟುತ್ತಿರÀುವುÀದರಿಂದ ಪದೇ ಪದೇ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಗಂಡ-ಹೆಂಡತಿ, ತಂದೆ-ತಾಯಿ-ಮಕ್ಕಳ, ಗುರು-ಶಿಷ್ಯರ ಸಂಬಂಧಗಳು ಸಮಾಧಿಯಾಗುತ್ತಿವೆ. ಕೌಟುಂಬಿಕ ಸಂಬಂಧಗಳು ನಾಗರಿಕತೆಯ ಹೆಸರಿನಲ್ಲಿ ನಮ್ಮ ಸಂಸ್ಕೃತಿಯಿಂದ ದೂರ ಸರಿಯುತ್ತಿವೆ ಎಂದರು.
ಬಸಣ್ಣ ದೇಸೂರ, ಭೀಮಜಿ ಸಾಳುಂಕೆ ನಾಗರಾಜ, ಚಿನ್ನಪ್ಪ, ಶಿವಪುತ್ರಪ್ಪ, ಪಾಂಡಣ್ಣ, ಶಂಬಣ್ಣ, ಚಂದ್ರಣ್ಣ, ಸದಾಶಿವ, ಮಂಜುನಾಥ, ಪವನ ಬಸೇಗಣ್ಣಿ ಸೇರಿದಂತೆ ವಿದ್ಯಾರ್ಥಿಗಳು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಲಕ್ಷ್ಮಿ ಈಳಿಗೇರ ಪ್ರಾರ್ಥನೆ ಗೀತೆ ಹಾಡಿದರು. ಬೀರಪ್ಪ ಮುದಿಯಣ್ಣವರ ಸ್ವಾಗತಿಸಿದರು. ಹೇಮಾ ಬಸೇಗಣ್ಣಿಿ ಕಾರ್ಯಕ್ರಮ ನಿರೂಪಿಸಿದರು. ರೇಖಾ ಬಸೇಗಣ್ಣಿ ವಂದಿಸಿದರು.

loading...