ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ: ರಾಹುಲ್ ಗಾಂಧಿ ಸಲಹೆ ಸಮ್ಮಿಶ್ರ ಸರ್ಕಾರದಲ್ಲಿ ವಿರಸ ಆರಂಭ

0
12
loading...

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ವಿರಸ ಆರಂಭವಾಗಿದೆ ಎನ್ನುವ ವಿಚಾರ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಾಗಿದ್ದು, ಜೆಡಿಎಸ್ ನಡೆಯನ್ನು ಒಪ್ಪಿಕೊಳ್ಳುವುದು ಕಷ್ಟವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್‍ನ ಇಬ್ಬರು ನಾಯಕರು ದೂರಿದ್ದಾರೆ.
ಜೆಡಿಎಸ್ ಪಕ್ಷ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಜೆಡಿಎಸ್ ನಡೆಯನ್ನು ಸಹಿಸುವುದು, ಒಪ್ಪಿಕೊಳ್ಳುವುದು ಕಷ್ಟಸಾಧ್ಯವಾಗಿದೆ,ನಿಮ್ಮ ಮಾತಿಗೆ ಬೆಲೆ ಕೊಟ್ಟು ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿದ್ದೇವೆ, ಎಂದು ದೂರಿದ್ದಾರೆನ್ನಲಾಗಿದೆ.
ಇದಕ್ಕೆ ಸಮಜಾಯಿಷಿ ನೀಡಿರುವ ರಾಹುಲ್ ಗಾಂಧಿ, ಮುಂದಿನ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ.ಆ ನಂತರದ ಬೆಳವ ಣಿಗೆ ಗಮನಿಸಿ ಮಾತುಕತೆ ನಡೆಸೋಣ.ನಿಮ್ಮ ಪಾಡಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿ.ಸರ್ಕಾರದ ವಿಚಾರದಲ್ಲಿ ಹೆಚ್ಚು ತಲೆ ತೂರಿಸುವುದು ಬೇಡ.ನಮ್ಮ ಕಡೆಯಿಂದ ಯಾವುದೇ ಸಮಸ್ಯೆ ಆಗಿದೆ ಎನ್ನುವ ಭಾವನೆ ಜನರಿಗೆ ಬರದಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಆದಷ್ಟು ಬೇಗ ಸಮನ್ವಯ ಸಮಿತಿಸಭೆ ನಡೆಸಿ ಅಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚಿಸಿ. ವಿಸ್ತರಣೆ ಆದಷ್ಟು ಬೇಗ ಆಗಬೇಕೆಂಬ ಸ್ಥಿತಿ ಇದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಿ. ಲೋಕಸಭೆ ಚುನಾವಣೆವರೆಗೆ ಸಾಧ್ಯವಾಗುವುದಿಲ್ಲ ಎಂದಿದ್ದರೆ ಮೊದಲೇ ಸಂಪುಟ ವಿಸ್ತರಣೆ ಮಾಡಿಕೊಳ್ಳಿ.ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿಯೂ ಚರ್ಚೆ ನಡೆಸಿ.ಅದರಆಯ್ಕೆ ಸಾಧ್ಯವಾದರೆ ಆದಷ್ಟು ಬೇಗ ಆಗಲಿ.ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳಿ.ಆದಷ್ಟು ಪ್ರತಿಯೊಬ್ಬ ಸಚಿವ, ಶಾಸಕ, ಮುಖಂಡರಿಗೆ ಜವಾಬ್ದಾರಿ ವಹಿಸಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಏರ್ಪಡಲಿದೆ. ಇಲ್ಲಿ ಮೈಸೂರು-ಕೊಡಗು ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಇದಾದಲ್ಲಿ ಕಾಂಗ್ರೆಸ್‍ಗೆ ಅದರಲ್ಲೂ ಸಿದ್ದರಾಮಯ್ಯಗೆ ದೊಡ್ಡ ಹಿನ್ನಡೆ ಆಗಲಿದೆ. ಆದ್ದರಿಂದ ಆದಷ್ಟು ಈ ಪ್ರಸ್ತಾವ ಬಂದರೆ ಒಪ್ಪಬೇಡಿ ಎಂದು ರಾಹುಲ್‍ಗೆ ರಾಜ್ಯ ಕೈ ನಾಯಕರು ಮನವಿ ಮಾಡಿದ್ದಾರೆ.
ಉಳಿದಂತೆ ನಮ್ಮ ಸಂಸದರು ಇರುವ ಕ್ಷೇತ್ರವನ್ನು ಬಿಟ್ಟುಕೊಡುವುದು ಬೇಡ. ಒಂದೊಮ್ಮೆ ಅನಿವಾರ್ಯವಾದಲ್ಲಿ ನಮ್ಮೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

loading...