ವಾರಕ್ಕೊಮ್ಮೆ ಜಿಲ್ಲೆಯಲ್ಲಿ ವಾಸ್ತವ್ಯ: ಸಚಿವ ಜಮೀರ್ ಅಹ್ಮದ್‍ಖಾನ್

0
4
loading...

ಕನ್ನಡಮ್ಮ ಸುದ್ದಿ-ಹಾವೇರಿ: ಜಿಲ್ಲೆಯ ಅಭಿವೃದ್ಧಿಗೆ ಒಂದು ಕುಟುಂಬವಾಗಿ ದುಡಿಯೋಣ ಎಂದು ಅಧಿಕಾರಿಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಮತ್ತು ಹಜ್, ವಕ್ಫ್ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್‍ಖಾನ್ ಅವರು ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಅನೌಪಚಾರಿಕ ಪರಿಚಯಾತ್ಮಕ ಸಭೆ ನಡೆಸಿದ ಅವರು ಸರ್ಕಾರ ವಿಶ್ವಾಸವಿಟ್ಟು ಹಾವೇರಿ ಜಿಲ್ಲಾ ಉಸ್ತುವಾರಿ ವಹಿಸಿದೆ. ಅತ್ಯಂತ ಸಂತೋಷವಾಗಿ ಈ ಜವಾಬ್ದಾರಿ ವಹಿಸಿಕೊಂಡಿರುವೆ. ಚುನಾವಣೆ ಗೆಲ್ಲುವ ಮುನ್ನ ಯಾವುದೇ ಇಲಾಖೆಯ ಸಚಿವನಾಗಿ ಹಾಗೂ ಜಿಲ್ಲಾ ಉಸ್ತುವಾರಿ ನೇಮಕಗೊಂಡರೆ ದಾಖಲೆ ಪ್ರಮಾಣದ ಅಭಿವೃದ್ಧಿ ಮಾಡುತ್ತೇನೆಂದು ಮಾಧ್ಯಮಗಳಿಗೆ ಮಾತು ನೀಡಿದ್ದೆ. ಈ ಮಾತಿನಂತೆ ಹಾವೇರಿ ಜಿಲ್ಲೆಯ ಅಭಿವೃದ್ಧಿ ಕಾರ್ಯವನ್ನು ಒಂದು ದಾಖಲೆ ಪ್ರಮಾಣದಲ್ಲಿ ಮಾಡಿತೋರಿಸುವ ಅಭಿಲಾಷೆ ನನ್ನದು. ಈ ಕಾರ್ಯದಲ್ಲಿ ಅಧಿಕಾರಿಗಳ ಕೆಲಸ ಮಹತ್ವದ್ದಾಗಿದೆ. ನೀವು ಕೆಲಸಮಾಡಿದರೆ ಮಾತ್ರ ನನ್ನ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು.ನಾನು ಸಚಿವನೆಂಬ ಅಂತರ ಕಾಯ್ದುಕೊಳ್ಳುವುದ ಬೇಡ, ಭಯ ಬೇಡ ಯಾವುದೇ ಅಭಿವೃದ್ಧಿ ಕಾರ್ಯದ ಚರ್ಚೆ ಇದ್ದರೆ ನೇರವಾಗಿ ಮಾತನಾಡಿ. ಸ್ನೇಹಿತರಾಗಿ ಒಂದು ಕುಟುಂಬದ ಸದಸ್ಯರಾಗಿ ಕೆಲಸಮಾಡೋಣ. ಉತ್ತಮ ಕೆಲಸಮಾಡಿ ಜನರಿಗೆ ಉತ್ತಮ ಸೇವೆ ನೀಡಲು ನನ್ನೊಂದಿಗೆ ಉತ್ತಮ ಕೆಲಸಮಾಡಿ ಎಂದು ನಿಮಗೆ ಕೈಜೋಡಿಸಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಅಪೌಚಾರಿಕವಾಗಿ ನಿಮ್ಮ ಪರಿಚಯ ಮಾಡಿಕೊಂಡಿದ್ದೇನೆ. ನೀತಿ ಸಂಹಿತೆ ಮುಗಿದ ನಂತರ ಕನಿಷ್ಠ ವಾರಕ್ಕೊಮ್ಮೆ ಜಿಲ್ಲೆಗೆ ಆಗಮಿಸಿ ಎರಡು ದಿನ ಇಲ್ಲೇ ವಾಸ್ತವ್ಯ ಮಾಡುವೆ ನಿಮ್ಮೊಂದಿಗೆ ಅಭಿವೃದ್ಧಿ ಕಾರ್ಯದ ಚರ್ಚೆಯಲ್ಲಿ ಪಾಲ್ಗೊಳ್ಳುವೆ. ಜಿಲ್ಲೆಯ ಅಭಿವೃದ್ಧಿಗೆ ನಿಮ್ಮಿಂದ ನಾನು ನನ್ನ ಗುರಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ, ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಅಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಒಳಗೊಂಡಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

loading...